ಬಿಎಸ್ವೈ ವಾಪಸಾತಿ ಬಿಜೆಪಿಯಲ್ಲಿ ಕೆಲವರಿಗೆ ಇಷ್ಟವಿಲ್ಲ
ಬೆಂಗಳೂರು, ಜೂನ್ 5: ಮಾಜಿ ಮುಖ್ಯಮಂತ್ರಿ, ಮಾಜಿ ಬಿಜೆಪಿ, ಹಾಲಿ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರು ಬಿಜೆಪಿಗೆ ವಾಪಸಾಗೋ ವಿಚಾರ ಓಕ್ಲಹಾಂ ಸುಂಟರಗಾಳಿಯಂತೆ ಬಿಜೆಪಿ ಅಂಗಳದಲ್ಲಿ ಒಂದು ಸುತ್ತು ಹೊಡೆದು ಶಾಂತವಾಗುವಂತಿದೆ.
ಯಡಿಯೂರಪ್ಪ ಅವರನ್ನು ಬಿಜೆಪಿಗೆ ವಾಪಸ್ ಕರೆತರುವುದಕ್ಕೆ ಬಹಿರಂಗವಾಗಿ ಪತ್ರ ಚಳವಳಿ ಸೇರಿದಂತೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲೇ ಪಕ್ಷದೊಳಗಿನ ಕಟ್ಟರ್ ಯಡಿಯೂರಪ್ಪ ವಿರೋಧಿ ಬಣ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ.

ಒಂದೊಮ್ಮೆ ಯಡಿಯೂರಪ್ಪ ತಮ್ಮ (ಕಳಂಕಿತ/ವಿವಾದಿತ) ಕಟ್ಟಾಳುಗಳಿಗೆ ಆಯಕಟ್ಟಿನ ಸ್ಥಾನಮಾನ ಕಲ್ಪಿಸಿ ಅಂದರೆ ಹೇಗೆ? ಅಡ್ವಾಣಿ ಭ್ರಷ್ಟಾಚಾರಿ ಎಂದ ಧನಂಜಯ ಕುಮಾರ್ ಹಾಗೂ ಲೆಹರ್ ಸಿಂಗ್ ಅವರನ್ನು ಬಿಜೆಪಿ ಸಹಿಸಿಕೊಳ್ಳುವುದು ಹೇಗೆ? -
ಯಡಿಯೂರಪ್ಪ ವಿಧಿಸುವ ಇಂಥ ಕಟ್ಟಳೆಗಳನ್ನು ಒಪ್ಪಿಕೊಂಡರೆ ಬಿಜೆಪಿ ಭವಿಷ್ಯ ಏನಾಗಬಹುದು ಎಂಬುದನ್ನು ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡುತ್ತಿರುವ ಶಾಸಕರು ಯೋಚಿಸಿದ್ದಾರೆಯೇ?
ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರಮಟ್ಟದಲ್ಲಿ ಭ್ರಷ್ಟಾಚಾರದ ವಿಷಯವೇ ಹೆಚ್ಚು ಪ್ರಸ್ತಾಪವಾಗುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ನಡುವೆ ಈ ಭ್ರಷ್ಟಾಚಾರವೇ ಪ್ರಮುಖ ಪ್ರಚಾರದ ವಿಷಯವಾಗಿ ಪರಿಣಮಿಸುವುದು ನಿಚ್ಚಳವಾಗುತ್ತಿದೆ.
ಹೀಗಿರುವಾಗ 'ಬ್ರಹ್ಮಾಂಡ ಭ್ರಷ್ಟಾಚಾರಿ' ಎಂದು ಗುರುತಿಸಿಕೊಂಡಿರುವ ಯಡಿಯೂರಪ್ಪ ಅವರನ್ನು ಬಿಜೆಪಿಗೆ ವಾಪಸ್ ಕರೆತಂದು ಚುನಾವಣೆಯನ್ನು ಎದುರಿಸುವುದು ಹೇಗೆ ಎಂಬ ಪ್ರಶ್ನೆ ಬಿಜೆಪಿ ನಾಯಕರನ್ನು ಕಾಡುತ್ತಿದೆ.
ಯಡಿಯೂರಪ್ಪ ತಮ್ಮ ನಡವಳಿಕೆಯನ್ನು ತೊರೆದು, ಪಕ್ಷದ ಶಿಸ್ತು ಒಪ್ಪಿ ಬರುವುದಾದರೆ ಯಾವುದೇ ಸಮಸ್ಯೆಯೂ ಇಲ್ಲ. ಆದರೆ, ಬಿಜೆಪಿಗೆ ವಾಪಸಾದ ನಂತರ ಮತ್ತೆ ಹಳೆಯ ಧೋರಣೆಗಳನ್ನೇ ಮುಂದುವರಿಸಿದರೆ ಹೇಗೆ? ಎಂಬುದು ಈ ನಾಯಕರ ಆತಂಕವಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಬದ್ಧ ವೈರಿ ಅನಂತ ಕುಮಾರ್ ಅವರನ್ನು ರಾಜ್ಯ ರಾಜಕಾರಣದಿಂದ ಸಂಪೂರ್ಣವಾಗಿ ಹೊರಗಿಡಬೇಕು ಎಂದೂ ಯಡಿಯೂರಪ್ಪ ಪಟ್ಟು ಹಿಡಿಯಬಹುದು ಎಂಬ ಆತಂಕ ಆ ವಿರೋಧಿ ನಾಯಕರನ್ನು ತೀವ್ರವಾಗಿ ಭಾಧಿಸುತ್ತಿದೆ.
ಸದ್ಯದ ಮಾಹಿತಿ ಪ್ರಕಾರ, ಯಡಿಯೂರಪ್ಪ ಅವರು ಬಿಜೆಪಿಗೆ ವಾಪಸಾಗುವ ಬಗ್ಗೆ ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಬಿಜೆಪಿಯಿಂದ ತೀವ್ರ ಒತ್ತಡ ಬಂದಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.











Click it and Unblock the Notifications