ವಿಕೆಂಡ್ ಜಾಲಿ ರೈಡ್ ಮೋಜಿಗೆ ಒಬ್ಬ ಬಲಿ

ಅಶೋಕ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಯೋಹಾಲ್ ಜಂಕ್ಷನ್‌ನಲ್ಲಿ ಈ ಅಪಘಾತ ನಡೆದಿದ್ದು, ಆಟೋಗೆ ಡಿಕ್ಕಿ ಹೊಡೆದ ವ್ಯಕ್ತಿ ಹೊಚ್ಚ ಹೊಸ ಆಡಿ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಮೃತ ವ್ಯಕ್ತಿ ಹಲಸೂರು ಸಮೀಪದ ಮರ್ಫಿ ಟೌನ್ ನಿವಾಸಿ ದೀಪಕ್ (22) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಮೃತ ದೀಪಕ್ ಸ್ನೇಹಿತ ಕಾರ್ತಿಕ್ ಹಾಗೂ ಆಟೋ ಚಾಲಕ ಯೂನಸ್ ಅಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಂ.ಜಿ.ರಸ್ತೆಯ ಸಮೀಪ ನಿರ್ಮಾಣವಾಗುತ್ತಿರುವ ಕ್ಲಬ್‌ನಲ್ಲಿ ಕಾರ್ಮಿಕರಾಗಿ ಇವರು ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಕೆಲಸ ಮುಗಿಸಿಕೊಂಡು, ಮನೆಗೆ ತೆರಳುವಾಗ ಈ ದುರ್ಘಟನೆ ನಡೆದಿದೆ.
ಜಾಲಿ ರೈಡ್ ನಿಂದ ಅಪಘಾತ : ಅಪಘಾತ ನಡೆದ ನಂತರ ಕಾರನ್ನು ರಸ್ತೆಯಲ್ಲೇ ಬಿಟ್ಟು, ಚಾಲಕ ಪರಾರಿಯಾಗಿದ್ದಾನೆ. ಸ್ನೇಹಿತರೊಂದಿಗೆ ಜಾಲಿ ರೈಡ್ ಬಂದಿದ್ದಾಗ ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸ ಆಡಿ ಕಾರು ಇನ್ನೂ ನೋಂದಣಿಯಾಗಿಲ್ಲ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮಳಿಗೆಯಲ್ಲಿ ಕಾರು ಖರೀದಿಸಲಾಗಿದ್ದು, ತಾತ್ಕಾಲಿಕ ನೊಂದಣಿ ಸಂಖ್ಯೆಯನ್ನೇ ಕಾರಿನ ಮಾಲೀಕರು ಬಳಸಿದ್ದಾರೆ.
ಭಾನುವಾರ ರಜಾ ದಿನವಾಗಿರುವ ಕಾರಣ ಕಾರಿನ ಮಾಲೀಕರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಸೋಮವಾರ ಮಾಲೀಕರನ್ನು ಪತ್ತೆ ಹಚ್ಚುವುದಾಗಿ ಅಶೋಕ ನಗರ ಸಂಚಾರ ಠಾಣೆ ಪೊಲೀಸರು ಹೇಳಿದ್ದಾರೆ.
ಟ್ರಿನಿಟಿ ವೃತ್ತದ ಕಡೆಯಿಂದ ವೇಗವಾಗಿ ಬಂದಿರುವ ಕಾರು ನಿಯಂತ್ರಣ ತಪ್ಪಿ ಮೆಯೋ ಹಾಲ್ ಬಳಿ ಆಟೋಗೆ ಡಿಕ್ಕಿ ಹೊಡೆದಿದೆ. ಕುಡಿದು ಕಾರನ್ನು ಚಲಾಯಿಸುತ್ತಿದ್ದರು ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications