ಬೆಳ್ಳಿ ಕುಕ್ಕರ್ ನಲ್ಲಿ ಅನ್ನ ಬೇಯಿಸುತ್ತಿದ್ದ ಸರ್ಕಾರಿ ಅಧಿಕಾರಿ

ಬಿಹಾರ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ತಡೆ ಘಟಕ ವಸತಿ ಇಲಾಖೆಯ ಅಧಿಕಾರಿಯ ಮನೆ ಮೇಲೆ ದಾಳಿ ನಡೆಸಿದಾಗ, ಆತ ಬೆಳ್ಳಿಯ ಕುಕ್ಕರ್ ನಲ್ಲಿ ಅಡುಗೆ ಮಾಡುವುದು, ಉಗುಳುದಾನಿಯಾಗಿ ಬೆಳ್ಳಿಯ ಪಾತ್ರೆ ಬಳಸುವುದು ಬೆಳಕಿಗೆ ಬಂದಿದೆ.
ಭ್ರಷ್ಟ ಅಧಿಕಾರಿಯ ಹೆಸರು ಅವದೇಶ್ ಕುಮಾರ್ ಮಂಡಲ್. ಮುಜಾಫರ್ ಪುರದ ವಸತಿ ಇಲಾಖೆಯ ಕಾರ‌್ಯಕಾರಿ ಎಂಜಿನಿಯರ್. ಈತನ ಮಾಸಿಕ ಆದಾಯ ಕಡಿಮೆ ಇದ್ದರೂ, ಈತನ ಒಟ್ಟಾರೆ ಆಸ್ತಿ ನೋಡಿ. ಪೊಲೀಸರು ಹೌಹಾರಿದ್ದಾರೆ.
ಅಧಿಕಾರಿಯ ಮನೆ ಜಾಲಾಡಿದ ಪೊಲೀಸರಿಗೆ, ಬೆಳ್ಳಿಯ ಕುಕ್ಕರ್ ಹಾಗೂ ಬೆಳ್ಳಿಯ ಪೀಕುದಾನಿ ಸಿಕ್ಕಿದೆ. ನಿತ್ಯ ಬೆಳ್ಳಿಯ ಕುಕ್ಕರ್ ನಲ್ಲಿಯೇ ಅನ್ನ, ಬೇಳೆ ಬೇಯುಸುತ್ತಿದ್ದೆ ಎಂದು ಅಧಿಕಾರಿ ಒಪ್ಪಿಕೊಂಡಿದ್ದಾನೆ. ಲಂಚದ ಹಣದ ಮೂಲಕ ಈತ ವಿಲಾಸಿ ಜೀವನ ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಕ್ಕಿದ್ದೇನು : ಮನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 1.5 ಕೆ.ಜಿ. ಚಿನ್ನ, 13 ಕೆ.ಜಿ. ಬೆಳ್ಳಿ ಮತ್ತು 15 ವಜ್ರಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಳ್ಳಿಯ ಕುಕ್ಕರ್ ಸಹಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ನಿಲ್ಲಿಸಿದ್ದಾರೆ.
ಈತನ ಹೆಸರಿನಲ್ಲಿ ಎರಡು ಮನೆಗಳು ಮತ್ತು ಒಂದು ಶಾಪಿಂಗ್ ಕಾಂಪ್ಲೆಕ್ಸ್ ಹೊಂದಿದ್ದಾನೆ. ನಿವೇಶನ, ಬ್ಯಾಂಕ್ ಲಾಕರ್ ಮುಂತಾದವುಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಜವೈಭೋಗದಿಂದ ಜೀವನ ಸಾಗಿಸುತ್ತಿದ್ದ ಈತ ಸದ್ಯ ಜೈಲು ಪಾಲಾಗಿದ್ದಾನೆ.
25 ಬ್ಯಾಂಕ್ ಅಕೌಂಟ್ : ಒಬ್ಬ ಸರ್ಕಾರಿ ಅಧಿಕಾರಿ 25 ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ನೋಡಿ ಪೊಲೀಸರೇ ಸುಸ್ತು ಹೊಡೆದಿದ್ದಾರೆ. ಈತ ವಿವಿಧ ಉದ್ಯಮಗಳಲ್ಲಿ ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿರುವ ದಾಖಲೆಗಳು ಪೊಲೀಸರು ಕೈ ಸೇರಿವೆ.
50 ಕೋಟಿ ಆಸ್ತಿ : ಅವದೇಶ್ ಕುಮಾರ್ ಮಂಡಲ್ ಅವರ ಆದಾಯಕ್ಕಿಂತ ಅವರ ಆಸ್ತಿ ಐವತ್ತು ಕೋಟಿಗೂ ಹೆಚ್ಚಾಗಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಈತನ ಆಸ್ತಿ ಪಾಸ್ತಿಯ ಪರಿಶೀಲನೆ ಮುಂದುವರೆದಿದ್ದು, ಒಟ್ಟು ಆಸ್ತಿ ಮೌಲ್ಯ ಇನ್ನೂ ತಿಳಿದು ಬಂದಿಲ್ಲ.












Click it and Unblock the Notifications