ಫಿಕ್ಸಿಂಗ್ : ಶ್ರೀನಿವಾಸನ್ ಪುತ್ರಿ ಹೆಸರು ಸುಳಿದಾಟ

ರೂಪಾ ಮೇಯಪ್ಪನ್ ಅವರು ಇಂಡಿಯಾ ಸಿಮೆಂಟ್ಸ್ ಕಂಪನಿಯ ನಿರ್ದೇಶಕಿಯಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ನ ಒಡತಿ ಕೂಡಾ ಹೌದು. ಸುಮಾರು 950 ಕೋಟಿ ರು ಬೆಲೆ ಬಾಳುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇಂಡಿಯಾ ಸಿಮೆಂಟ್ಸ್ ಮುಖ್ಯ ಪ್ರಾಯೋಜಕ ಸಂಸ್ಥೆ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ.
ಮುಂಬೈನಲ್ಲಿ ಗುರುನಾಥ್ ವಿಚಾರಣೆ ಜಾರಿಯಲ್ಲಿರುವಂತೆ ಚೆನ್ನೈನಲ್ಲಿ ಅವರ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದನ್ನು ಓದಿದ್ದೀರಿ. ಅಗ ಸಿಕ್ಕ ದಾಖಲೆಗಳ ಪ್ರಕಾರ ರೂಪಾ ಅವರು ಕೂಡಾ ತಮ್ಮ ಪತಿ ಗುರುನಾಥ್ ಅವರ ಬೆಟ್ಟಿಂಗ್ ಚಟಕ್ಕೆ ಸಾಥ್ ನೀಡಿದ್ದರು ಎಂಬ ಸಾಕ್ಷಿ ಸಿಕ್ಕಿದೆ ಎಂಬ ಸುದ್ದಿ ಇದೆ.
ಮೇಯಪ್ಪನ್ ಅವರು ಚೆನ್ನೈ ತಂಡದ ಮುಖ್ಯಸ್ಥ ಎಂಬುದಕ್ಕೆ ಸಾಕ್ಷಿಯಾಗಿ ಗುರುತಿನ ಚೀಟಿ ಸಿಕ್ಕಿದೆ. ಗುರುನಾಥ್ ಹಾಗೂ ವಿಂದೂ ನಡುವೆ ನಡೆದ ಕರೆ ದಾಖಲೆ ಪರಿಶೀಲನೆ ನಂತರ ಚೆನ್ನೈನ ಹೋಟೆಲ್ ಮಾಲೀಕನ ಹೆಸರು ಕೇಳಿ ಬಂದಿದೆ.
ಆದರೆ, ರೂಪಾ ಅವರ ಒಡೆತನದ ಇಂಡಿಯಾ ಸಿಮೆಂಟ್ಸ್ ಪತ್ರಿಕಾ ಹೇಳಿಕೆ ನೀಡಿ ಗುರುನಾಥ್ ಅವರು ಚೆನ್ನೈ ತಂಡದ ಪ್ರಮುಖ ಸದಸ್ಯರಲ್ಲ ಎಂದು ಸ್ಪಷ್ಟನೆ ನೀಡಿತ್ತು. ಈ ಮೂಲಕ ಸಂಸ್ಥೆಯ ಲಕ್ಷಾಂತರ ಷೇರುದಾರರ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಆದರೆ, ದಾಳಿ ಸಂದರ್ಭದಲ್ಲಿ ಸುಮಾರು 190ಕ್ಕೂ ಅಧಿಕ ಗುರುತಿನ ಚೀಟಿ, ಚೆನ್ನೈ ತಂಡದ ಅಧಿಕೃತ ಟೀ ಶರ್ಟ್ ಇನ್ನೂ ಅನೇಕ ದಾಖಲೆಗಳು ಸಿಕ್ಕಿತ್ತು. ಸದ್ಯಕ್ಕೆ ಮೇ.29ರವರೆಗೂ ಮೇಯಪ್ಪನ್ ಅವರು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಗೆ ಒಳಪಡುತ್ತಾರೆ. ವಿಂದೂ ಹಾಗೂ ಗುರುನಾಥ್ ಅವರನ್ನು ಒಟ್ಟಿಗೆ ವಿಚಾರಣೆ ನಡೆಸಲಾಗುತ್ತದೆ. ಅಗತ್ಯ ಬಿದ್ದರೆ ರೂಪಾ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ಹೇಳಿದೆ.
ಯಾರೀಕೆ ರೂಪಾ: ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರ ಪುತ್ರಿ. 39 ವರ್ಷ ವಯಸ್ಸಿನ ರೂಪಾ ಗುರುನಾಥ್ ಮೇಯಪ್ಪನ್ ಭಾರತದ ಪ್ರಭಾವಿ ಮಹಿಳಾ ಉದ್ಯಮಿ. 42 ವರ್ಷದ ಪತಿ ಗುರುನಾಥ್ ಮೇಯಪ್ಪನ್ ಅವರ ಪರಂಪರಾಗತ ಉದ್ಯಮ ಇಂಡಿಯಾ ಸಿಮೆಂಟ್ಸ್ ಗೆ 2010ರಿಂದ ಶಾಶ್ವತ ನಿರ್ದೇಶಕಿ. ಪತಿ ಅವರ ಜೊತೆ ಎವಿಎಂ ಸ್ಟುಡಿಯೋಗೂ ಒಡತಿ.
ಸುಮಾರು 943.95 ಕೋಟಿ ಮೌಲ್ಯ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಒಡತಿ.ಕೊರಮಂಡಲ್ ಎಲೆಕ್ಟ್ರಿಕ್ ಕಂಪನಿ ನಿರ್ದೇಶಕಿ. 2007ರಿಂದ 2010ರ ವರೆಗೂ ಇಂಡಿಯಾ ಸಿಮೆಂಟ್ಸ್ ನ ಹೆಚ್ಚುವರಿ ನಿರ್ದೇಶಕಿಯಾಗಿದ್ದರು.
ಓದಿರುವುದು ಬಿಎಸ್ ಸಿ, ಕಂಪ್ಯೂಟರ್ ಅಪ್ಲಿಕೇಷನ್ ನಲ್ಲಿ ಸ್ನಾತಕೋತ್ತರ ಪದವಿ. ತಾರಾ ಹಾಗೂ ಶಾರದಾ ಎಂಬ ಇಬ್ಬರು ಮಕ್ಕಳು. ರೂಪಾ ಅವರಿಗೆ ಅಧಿಕೃತವಾಗಿ ವಾರ್ಷಿಕ 3.9 ಕೋಟಿ ರು ಪೇಮೆಂಟ್ ಸಿಗುತ್ತಿದೆ. ರೂಪಾ ಅವರ ಹೆಸರು ಫಿಕ್ಸಿಂಗ್ ಪ್ರಕರಣದಲ್ಲಿ ಗಾಳಿಸುದ್ದಿ ರೀತಿಯಲ್ಲಿ ಕೇಳಿ ಬಂದರೂ ಯಾವುದೇ ಸ್ಪಷ್ಟವಾದ ಸಾಕ್ಷಿ ದೊರೆತಿಲ್ಲ.












Click it and Unblock the Notifications