ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಶೆಟ್ಟರ್ ಅಸಮಾಧಾನ

ಮಂಗಳವಾರ ಗುಲ್ಬರ್ಗದಲ್ಲಿ ಮಾತನಾಡಿದ ಶೆಟ್ಟರ್, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಬಜೆಟ್ ಮಂಡಿಸಬೇಕು ಎಂಬ ನಿಯಮವೇನಿಲ್ಲ. ತಾವು ಮಂಡಿಸಿದ ಬಜೆಟ್ ಜನಪರವಾಗಿದೆ. ವಿಧಾನ ಮಂಡಲ ಅಧಿವೇಶನದಲ್ಲಿ ಅದಕ್ಕೆ ಒಪ್ಪಿಗೆ ದೊರಕಿದೆ.
ಇಂತಹ ಸಂದರ್ಭದಲ್ಲಿ ಜುಲೈನಲ್ಲಿ ಸಿದ್ದರಾಮಯ್ಯ ಮತ್ತೇಕೆ ಬಜೆಟ್ ಮಂಡಿಸಬೇಕು? ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ. ತಾವು ಬಜೆಟ್ ಮಂಡಿಸುವ ಸಂರ್ಭದಲ್ಲಿ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ತಮ್ಮ ಬಜೆಟ್ ನ ಹಲವು ಯೋಜನೆಗಳನ್ನು ಶ್ಲಾಘಿಸಿದ್ದರು.(ಕರ್ನಾಟಕ ಬಜೆಟ್ 2013-14 ಮುಖ್ಯಾಂಶಗಳು)
ಈಗ ಅವರು ಮುಖ್ಯಮಂತ್ರಿಯಾದ ತಕ್ಷಣ ಹೊಸ ಬಜೆಟ್ ಮಂಡಿಸುತ್ತಿರುವುದೇಕೆ?. ಕಾಂಗ್ರೆಸ್ ಸರ್ಕಾರ ಹೊಸ ಜನಪರ ಯೋಜನೆಗಳನ್ನು ಜಾರಿಗೊಳಿಸಲಿ. ಆದರೆ, ಅದಕ್ಕಾಗಿ ನೂತನ ಬಜೆಟ್ ಮಂಡಿಸುವ ಅವಶ್ಯಕತೆ ಇಲ್ಲ ಎಂದು ಶೆಟ್ಟರ್ ಹೇಳಿದರು.
ತಾವು ಬಜೆಟ್ ಮಂಡಿಸುವಾಗ ಪ್ರಕಟಿಸಿದ ಯೋಜನೆಗಳನ್ನು ಜಾರಿಗೊಳಿಸಿದರೂ ಅದು ಕಾಂಗ್ರೆಸ್ ಪಕ್ಷದ ಸಾಧನೆ ಎಂದೇ ಬಿಂಬಿತವಾಗುತ್ತದೆ. ಆದ್ದರಿಂದ ಪ್ರತ್ಯೇಕ ಬಜೆಟ್ ಮಂಡಿಸುವ ಅಗತ್ಯವಿಲ್ಲ. ಹಿಂದಿನ ಬಜೆಟ್ ನ ಜನಪರ ಕಾರ್ಯಕ್ರಮಗಳನ್ನೆ ಮುಂದುವರೆಸಿಕೊಂಡು ಹೋಗಲಿ ಎಂದು ಶೆಟ್ಟರ್ ಅಭಿಪ್ರಾಯಪಟ್ಟರು.
ಬಿಜೆಪಿ ಸರ್ಕಾರ ತರಾತುರಿಯಲ್ಲಿ ಕೇಂದ್ರ ಬಜೆಟ್ ಗೂ ಮುನ್ನವೇ ಬಜೆಟ್ ಮಂಡಿಸಿ ನಾಲ್ಕು ತಿಂಗಳ ಲೇಖಾನುದಾನ ಪಡೆದಿದೆ. ಈ ಅವಧಿ ಜುಲೈ ತಿಂಗಳಿನಲ್ಲಿ ಮುಗಿಯುತ್ತದೆ. ಆದ್ದರಿಂದ ನೂತನ ಬಜೆಟ್ ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.(ಜುಲೈನಲ್ಲಿ ಬಜೆಟ್ ಅಧಿವೇಶನ ಸಾಧ್ಯತೆ: ಸಿದ್ದರಾಮಯ್ಯ)
ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಸಭೆ ನಡೆಸಿರುವ ಸಿದ್ದರಾಮಯ್ಯ ಬಜೆಟ್ ಮಂಡಿಸುವ ಸಿದ್ಧತೆ ಪ್ರಾರಂಭಿಸಿದ್ದಾರೆ. ಅಲ್ಲದೇ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಅಗತ್ಯವಿಲ್ಲ, ಜುಲೈ ಮೊದಲ ವಾರದಿಂದ ಬಜೆಟ್ ಅಧಿವೇಶನ ಪ್ರಾರಂಭಿಸುವುದಾಗಿಯೂ ಹೇಳಿದ್ದಾರೆ.












Click it and Unblock the Notifications