ಬಿಬಿಎಂಪಿ ಮೇಯರ್ ಸ್ಥಾನ ಕಾಂಗ್ರೆಸ್ ಪಾಲು?

ಸೋಮವಾರ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರ ಮೇಯರ್ ಮತ್ತು ಉಪ ಮೇಯರ್ ಸ್ಥಾನದ ಮೀಸಲಾತಿ ನಿಗದಿ ಮಾಡಿಲ್ಲ, ಆದ್ದರಿಂದ ಬಿಬಿಎಂಪಿ ಮೇಯರ್ ಆಯ್ಕೆಯ ಚುನಾವಣೆ ವಿಳಂಬವಾಗುತ್ತಿದೆ ಎಂದರು.
ನಿಗದಿಯಂತೆ ಏ. 27ಕ್ಕೆ ಚುನಾವಣೆ ನಡೆಯಬೇಕಿತ್ತು. ಮೀಸಲಾತಿ ಮರು ನಿಗದಿಗೊಳಿಸಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದ್ದರಿಂದ ಚುನಾವಣೆ ತಡವಾಯಿತು. ಹೈ ಕೋರ್ಟ್ ಆದೇಶದಂತೆ, ಮೇಯರ್ ಅಥವ ಉಪ ಮೇಯರ್ ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ಎಸ್‌ಟಿ ಸಮುದಾಯಕ್ಕೆ ಮೀಸಲಿಡಬೇಕು.
ಈ ಬಗ್ಗೆ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದೇನೆ. ಮೇಯರ್ ಸ್ಥಾನವನ್ನು ಎಸ್‌ಟಿ ವರ್ಗಕ್ಕೆ ಮೀಸಲಿಡಲು ಸರ್ಕಾರ ಆಲೋಚನೆ ನಡೆಸಿದೆ. ಶೀಘ್ರದಲ್ಲೇ ಸರ್ಕಾರ ಮೀಸಲಾತಿ ಪಟ್ಟಿ ಬಿಡುಗಡೆಗೊಳಿಸಲಿದೆ ಎಂದರು. (ಮೇಯರ್, ಉಪಮೇಯರ್ ಚುನಾವಣೆ ಮುಂದೂಡಿಕೆ)
ಬಿಜೆಪಿಗೆ ಆತಂಕ : ಹಾಲಿ ಬಿಬಿಎಂಪಿ ಮೇಯರ್ ಹುದ್ದೆ ಬಿಜೆಪಿ ವಶದಲ್ಲಿದ್ದು, ವೆಂಕಟೇಶ್ ಮೂರ್ತಿ ಉಸ್ತುವಾರಿ ಮೇಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮೇಯರ್ ಸ್ಥಾನದ ಮೀಸಲಾತಿಯನ್ನು ಎಸ್ ಟಿ ವರ್ಗಕ್ಕೆ ನಿಗದಿಗೊಳಿಸಲು ಚಿಂತನೆ ನಡೆಸುತ್ತಿದೆ.
ಬಿಬಿಎಂಪಿಯಲ್ಲಿ ಎಸ್ ಟಿ ವರ್ಗಕ್ಕೆ ಸೇರಿದ ಯಾವ ಬಿಜೆಪಿ ಸದಸ್ಯರು ಇಲ್ಲ. ಆದ್ದರಿಂದ ಮೇಯರ್ ಸ್ಥಾನ ಕಾಂಗ್ರೆಸ್ ಕೈ ಸೇರುವುದು ಖಚಿತ ಎಂದು ತಿಳಿದು ಬಂದಿದೆ. ಇದರಿಂದಾಗಿ ಬಿಜೆಪಿ ಬೆಂಗಳೂರಿನ ಮೇಯರ್ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.
ಬಿಬಿಎಂಪಿಯ ಹಾಲಿ ಮೇಯರ್ ಡಿ.ವೆಂಕಟೇಶಮೂರ್ತಿ ಮತ್ತು ಹಾಗೂ ಉಪಮೇಯರ್ ಎಲ್.ಶ್ರೀನಿವಾಸ್ ಅವರ ಒಂದು ವರ್ಷದ ಅವಧಿ ಏಪ್ರಿಲ್ 26ಕ್ಕೆ ಕೊನೆಗೊಂಡಿದ್ದು, ನೂತನ ಮೇಯರ್ ಆಯ್ಕೆ ಆಗುವವರೆಗೆ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇಬ್ಬರು ರಾಜೀನಾಮೆ : ಬಿಬಿಎಂಪಿ ಸದಸ್ಯರಾಗಿದ್ದು, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷದ ಬೈರತಿ ಬಸವರಾಜ್ ಮತ್ತು ಮುನಿರತ್ನ ಚುನಾವಣೆಯಲ್ಲಿ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ.
ಇದರಿಂದ ಇವರು ಬಿಬಿಎಂಪಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬಹುದಾಗಿದೆ. ಸ್ವತಃ ಮೇಯರ್ ವೆಂಕಟೇಶ್ ಮೂರ್ತಿ ಶಾಂತಿನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುಣಾವಣೆಗೆ ಸ್ಪರ್ಧಿಸಿದ್ದರು. ಆದರೆ, ಕಾಂಗ್ರೆಸ್ ನ ಹ್ಯಾರೀಸ್ ವಿರುದ್ಧ ಪರಾಭವಗೊಂಡಿದ್ದಾರೆ. (ಬೆಂಗಳೂರು ಜಿಲ್ಲೆ: ಸೋತವರು ಗೆದ್ದವರು)












Click it and Unblock the Notifications