ಪ್ರಮಾಣವಚನ, ಸಿಗದ ಸ್ಥಾನ, ಭುಗಿಲೆದ್ದ ಅಸಮಾಧಾನ
ಬೆಂಗಳೂರು, ಮೇ. 18 : ಇಪ್ಪತ್ತೆಂಟು ಕಾಂಗ್ರೆಸ್ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದ ದಿನ ಕಾಂಗ್ರೆಸ್ ಹೈಕಮಾಂಡಿಗೆ ನೂರೆಂಟು ತಲೆನೋವುಗಳನ್ನು ತಂದಿಟ್ಟಿದೆ. ಸಿದ್ದರಾಮಯ್ಯ ಸರಕಾರಕ್ಕೆ ಆರಂಭದಿಂದಲೇ ವಿಘ್ನಗಳು ಕಾಡಲಾರಂಭಿಸಿವೆ.
ಜಿಲ್ಲಾವಾರು ಪ್ರಾತಿನಿಧ್ಯ ನೀಡುವುದೋ, ಜಾತಿವಾರು ಪ್ರಾತಿನಿಧ್ಯ ನೀಡಿ ಆಯಾ ಜಾತಿಯವರನ್ನು ಸಂತೈಸುವುದೋ, ಸಾಮಾಜಿಕ ನ್ಯಾಯದಡಿ ಸಚಿವ ಸ್ಥಾನ ನೀಡುವುದೋ, ಕಳಂಕರಹಿತರಿಗೆ ಖಾತೆ ನೀಡಿ ಜನರನ್ನು ತೃಪ್ತಿಪಡಿಸುವುದೋ ಅಥವಾ ಪ್ರತಿಭಟನೆ ವ್ಯಕ್ತಪಡಿಸುತ್ತಿರುವ ಕಾರ್ಯಕರ್ತರನ್ನು ಸಂತೃಪ್ತಿಪಡಿಸುವುದೋ ಎಂಬ ದ್ವಂದ್ವದಲ್ಲಿ ರಾಜ್ಯ ಕಾಂಗ್ರೆಸ್ ಮುಳುಗಿದೆ.
ಬೇರೆ ಪಕ್ಷದಿಂದ ವಲಸೆ ಬಂದವರಿಗೆ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರಿಗೆ ಮಣೆ ಹಾಕಿರುವುದು ಅಸಮಾಧಾನಕ್ಕೆ ಒಂದು ಕಾರಣವಾದರೆ, ನಾಲ್ಕಾರು ವರ್ಷಗಳಿಂದ ಗೆಲ್ಲುತ್ತ ಬಂದಿದ್ದರೂ ಮತ್ತು ಕಾಂಗ್ರೆಸ್ ಮೂಲದವರಾದರೂ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಅತೃಪ್ತಿ ಭುಗಿಲೇಳಲು ಕಾರಣವಾಗಿದೆ. ರಾಜ್ಯಾದ್ಯಂತ ಅನೇಕ ಜಿಲ್ಲೆಗಳಲ್ಲಿ ಅತೃಪ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಹೈಕಮಾಂಡ್ ಈ ಅಸಮಾಧಾನದ ಹೊಗೆಯನ್ನು ಹೇಗೆ ಹತ್ತಿಕ್ಕುತ್ತದೆ? ಪ್ರಭಾವಿ ನಾಯಕ ಮತ್ತು ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿದ್ದ ಡಿಕೆ ಶಿವಕುಮಾರ್ ಅವರಿಗೆ ಯಾವ ರೀತಿ ಸಿದ್ದರಾಮಯ್ಯ ನ್ಯಾಯ ದೊರಕಿಸಿಕೊಡುತ್ತಾರೆ? ಇವು ಸದ್ಯಕ್ಕೆ ಜನರನ್ನು ಕಾಡುತ್ತಿರುವ ಪ್ರಶ್ನೆಗಳು. ಇವೆಲ್ಲದರ ನಡುವೆ, ಇಂದಿನ ದಿನದ ಸಮಾರಂಭದ ಚಿತ್ರಗಳತ್ತ ಒಂದು ಕಣ್ಣು ಹಾಯಿಸೋಣ. [ಪಿಟಿಐ ಫೋಟೋಗಳು]

ಕ್ಷೇತ್ರದಲ್ಲಿ ಮತ್ತು ವಿಧಾನಸೌಧದಲ್ಲಿ ಕೆಲಸ ಮಾಡಿ
ಮೊದಲ ಸಂಪುಟ ಸಭೆಯನ್ನು ವಿಧಾನಸೌಧದಲ್ಲಿ ನಡೆಸಿದ ಸಿದ್ದರಾಮಯ್ಯ ಅವರು ಸಚಿವರಿಗೆ ತಮ್ತಮ್ಮ ಕ್ಷೇತ್ರಗಳಲ್ಲಿ ಅಡ್ಡಾಡಿ ಮತ್ತು ವಿಧಾನಸೌಧದಲ್ಲಿ ಕುಳಿತು ಕಾನೂನು ಚೌಕಟ್ಟಿನಲ್ಲಿ ದಕ್ಷ ರೀತಿಯಲ್ಲಿ ಕೆಲಸ ಮಾಡಿ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಜನರು ಕುಡಿಯುವ ನೀರಿನ ಅಭಾವ ಎದುರಿಸುತ್ತಿದ್ದಾರೆ. ಅತ್ತ ಹೆಚ್ಚಿನ ಗಮನ ನೀಡಬೇಕೆಂದು ಮನವಿ ಮಾಡಿದ್ದಾರೆ.

ಅಂಬರೀಷ್ ದಂಪತಿ ಮೊಗದಲ್ಲಿ ಏನು ಕಳೆ?
ಮೊದಲ ಬಾರಿ ಮಂಡ್ಯದಿಂದ ಆಯ್ಕೆಯಾಗಿರುವ ನಟ ಅಂಬರೀಷ್, ಹಲವಾರು ಬಾರಿ ಗೆದ್ದಿರುವ ಶಾಸಕರನ್ನು ಹಿಂದಿಕ್ಕಿ ಸಿದ್ದು ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡುಬಿಟ್ಟಿದ್ದಾರೆ. ಕಾಯಾ ವಾಚಾ ಮನಸಾ ಕೆಲಸ ಮಾಡುವೆನೆಂದು ಪ್ರತಿಜ್ಞೆ ಮಾಡಿರುವ ಅಂಬಿ ಮತ್ತು ಜೊತೆಗಿದ್ದ ಸುಮಲತಾ ಅವರ ಮೊಗದಲ್ಲಿ ವಿಶೇಷ ಕಳೆ.

ಥತ್ ಈ ಸಚಿವರ ಸಾಲಿನಲ್ಲಿ ನಮ್ಮೋರೂ ಇರಬೇಕಿತ್ತು
ಹೀಗೆ ಅಂದುಕೊಂಡವರು ಎಷ್ಟು ಶಾಸಕರೋ! ತಮ್ಮ ಹೆಸರೂ ಪಟ್ಟಿಯಲ್ಲಿ ಇರುತ್ತದೆಂದು ಹೊಸ ಬಟ್ಟೆಗಳನ್ನು ಹೊಲಿಸಿಕೊಂಡು ಸಿದ್ಧವಾಗಿದ್ದವರು ಇನ್ನೆಷ್ಟೋ? ಒಟ್ಟು ಹತ್ತು ಜಿಲ್ಲೆಗಳಲ್ಲಿ ಶಾಸಕರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲಾಗಿಲ್ಲ ಎಂದು ತಮ್ಮ ಬೆಂಬಲಿಗರ ಮುಖಾಂತರ ಅಸಮಾಧಾನದ ಹೊಗೆ ಉಗುಳಿದ್ದಾರೆ. ಮೈಸೂರು, ಚಿಕ್ಕಬಳ್ಳಾಪುರ, ರಾಮನಗರ, ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ.

ಪ್ರಮಾಣವಚನ ಸಮಾರಂಭಕ್ಕೆ ಕಾಂಗ್ರೆಸ್ಸಿಗರೇ ಗೈರು
ಕೆಪಿಸಿಸಿ ಅಧ್ಯಕ್ಷ ಸೇರಿ ಸ್ಥಾನ ಗಿಟ್ಟಿಸಲು ವಿಫಲವಾದ ಡಿಕೆಶಿ, ಮೋಟಮ್ಮ, ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್ ಮುಂತಾದ ಕಾಂಗ್ರೆಸ್ಸಿಗರೇ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದು ಆ ಪಕ್ಷದವರಿಗೇ ಮುಜುಗರ ಉಂಟುಮಾಡಿದೆ. ವಿಧಾನಪರಿಷತ್ ಸದಸ್ಯರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದಿರುವುದು ಪ್ರಮುಖ ಕಾರಣ. ಇವರೊಂದಿಗೆ, ವಿರೋಧ ಪಕ್ಷದ ಅನೇಕ ನಾಯಕರು ಕೂಡ ಈ ಸಮಾರಂಭಕ್ಕೆ ಬಂದಿರಲಿಲ್ಲ.

ಮುಂದಿನ ವಿಸ್ತರಣೆಯಲ್ಲಿ ಯಾರಿಗೆ ಅದೃಷ್ಟ?
ಸಂಪುಟದಲ್ಲಿ ಮುಖ್ಯಮಂತ್ರಿ ಹೊರತುಪಡಿಸಿದರೆ 33 ಸಚಿವರಿಗೆ ಮಾತ್ರ ಸ್ಥಾನ. ಇದರಲ್ಲಿ 28 ಸ್ಥಾನಗಳನ್ನು ಈಗಾಗಲೆ ತುಂಬಲಾಗಿದೆ. ಉಳಿದ ಸ್ಥಾನಗಳಿಗೆ ಈಗಾಗಲೆ ಭಾರೀ ಲಾಬಿ ಶುರುವಾಗಿದೆ. ಡಿಕೆ ಶಿವಕುಮಾರ್ ಶನಿವಾರವೇ ದೆಹಲಿಗೆ ತೆರಳಿ ಸೋನಿಯಾ ಅವರನ್ನು ಭೇಟಿ ಮಾಡಿದ್ದಾರೆ. ಮೋಟಮ್ಮ ಅಂಡ್ ಗ್ಯಾಂಗ್ ಕೂಡ ಸೋನಿಯಾರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಲಿದ್ದಾರೆ. ಮುಂದೇನಾಗಲಿದೆ? ಕಾದು ನೋಡಿ.

ರಾಜ್ಯಾದ್ಯಂತ ಭುಗಿಲೆದ್ದ ಅಸಮಾಧಾನದ ಬೆಂಕಿ
ಯಾದಗಿರಿಯಲ್ಲಿ ಕಾಂಗ್ರೆಸ್ ಕಚೇರಿಗೇ ಬೆಂಕಿ ಇಡಲಾಗಿದೆ. ರಾಮನಗರ ಜಿಲ್ಲೆಯಲ್ಲಿ ಡಿಕೆಶಿ ಬೆಂಬಲಿಗರು ಟೈರು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಟೈರು ಸುಟ್ಟು ಪ್ರತಿಭಟನೆ ನಡೆಸಲಾಗಿದೆ. ಮೈಸೂರಿನಲ್ಲಿ ತನ್ವೀರ್ ಸೇಠ್ ಬೆಂಬಲಿಗನೊಬ್ಬ ಮೈಮೇಲೆ ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅರಕಲಗೂಡಿನಲ್ಲಿಯೂ ಎ ಮಂಜು ಪರ ಪ್ರತಿಭಟನೆ ನಡೆಸಲಾಗಿದೆ.












Click it and Unblock the Notifications