ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಸಿದ್ದುಗಾಗಿ ಕಾವೇರಿ ಬಿಡುತ್ತಾರೆ ಶೆಟ್ಟರ್

|
Google Oneindia Kannada News

Jagadish Shettar
ಬೆಂಗಳೂರು, ಮೇ 15 : ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾವೇರಿ ಬಿಟ್ಟು ಕೊಡಬೇಕಾಗಿದೆ. ಸಿದ್ದರಾಮಯ್ಯ ಕುಮಾರ ಕೃಪ ರಸ್ತೆಯಲ್ಲಿರುವ ಕಾವೇರಿ ಬಂಗಲೆಯಲ್ಲಿ ವಾಸ್ತವ್ಯ ಹೂಡಲು ಬಯಸಿದ್ದು, ನಿವಾಸ ಖಾಲಿ ಮಾಡುವಂತೆ ಶೆಟ್ಟರ್ ಅವರಿಗೆ ಅಧಿಕೃತ ಸಂದೇಶ ರವಾನೆಯಾಗಿದೆ.

ಸಿಎಂ ಸಿದ್ದರಾಮಯ್ಯ ಸದ್ಯ ಕುಮಾರಕೃಪ ಪೂರ್ವ ಬಡಾವಣೆ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸವಾಗಿದ್ದಾರೆ. ಸಿದ್ದರಾಮಯ್ಯ ಹಿಂದೆ ಉಪ ಮುಖ್ಯಮಂತ್ರಿಯಾಗಿದ್ದಾಗ ಕಾವೇರಿಯಲ್ಲಿ ವಾಸವಾಗಿದ್ದರು. ಅದು ಅವರಿಗೆ ಅದೃಷ್ಟದ ಬಂಗಲೆಯಾಗಿದ್ದು, ಅಲ್ಲೇ ವಾಸ್ತವ್ಯ ಹೂಡುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಸದ್ಯ ಕಾವೇರಿ ಬಂಗಲೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಸ್ತವ್ಯ ಹೂಡಿದ್ದು, ಮೂರು ತಿಂಗಳಲ್ಲಿ ನಿವಾಸ ಖಾಲಿ ಮಾಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಾಜಿ ಸಿಎಂಗೆ ನಿರ್ದೇಶನ ನೀಡಿದೆ. ಇದರಿಂದಾಗಿ ನೂತನ ಸಿಎಂಗಾಗಿ ಶೆಟ್ಟರ್ ಕಾವೇರಿಯನ್ನು ಬಿಟ್ಟುಕೊಡುವ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ.

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸರ್ಕಾರಿ ಬಂಗಲೆ ಪಡೆಯಲು ಸಚಿವರ ಪೈಪೋಟಿ ಪ್ರಾರಂಭವಾಗುತ್ತದೆ. ಮುಖ್ಯಮಂತ್ರಿಗಳ ನಿರ್ದೇಶನದಂತೆ ಸರ್ಕಾರಿ ಬಂಗಲೆಗಳನ್ನು ಸಚಿವರರಿಗೆ ನೀಡಲಾಗುತ್ತದೆ. ಆದರೆ, ಸದ್ಯ ಸಚಿವ ಸಂಪುಟ ರಚನೆ ನಡೆದಿಲ್ಲ. ಆದ್ದರಿಂದ ಸಿಎಂ ಎಲ್ಲಿ ನೆಲೆಸುತ್ತಾರೆ ಎಂಬುದು ಮಾತ್ರ ಕುತೂಹಲ ಕೆರಳಿಸಿತ್ತು.

ಮುಖ್ಯಮಂತ್ರಿ ಸೇರಿದಂತೆ 34 ಸಚಿವರಿಗೆ ಸರ್ಕಾರಿ ಬಂಗಲೆ ನೀಡಬೇಕಾಗಿದೆ. ಆದರೆ, ಕೇವಲ 22 ಬಂಗಲೆಗಳಿವೆ. ಇವುಗಳಲ್ಲಿಯೂ ಲೋಕಾಯುಕ್ತರು, ಸಭಾಪತಿ ಮತ್ತು ಉಪಸಭಾಪತಿಗಳು ವಾಸವಾಗಿರುವುದರಿಂದ ಕೇವಲ 18 ಬಂಗಲೆಗಳು ಲಭ್ಯವಿದೆ. ಸಚಿವ ಸಂಪುಟ ವಿಸ್ತರಣೆ ನಂತರ ಈ ಬಂಗಲೆ ಪಡೆಯಲು ಪೈಪೋಟಿ ಆರಂಭವಾಗಲಿದೆ.

ಅನುಗ್ರಹ ಅನಾಥ : ಸಿದ್ದರಾಮಯ್ಯ ಕಾವೇರಿ ಮೊರೆ ಹೋಗಿರುವುದರಿಂದ ಮುಖ್ಯ ಮಂತ್ರಿಗಳ ವಾಸಕ್ಕಾಗಿ ನಿರ್ಮಿಸಿದ 'ಅನುಗ್ರಹ' ಅನಾಥವಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ರೇಸ್ ಕೋರ್ಸ್ ರಸ್ತೆ ನಿವಾಸದಲ್ಲೇ ವಾಸ್ತವ್ಯ ಹೂಡಿದ್ದರು.

ಜಗದೀಶ್ ಶೆಟ್ಟರ್ ಸಚಿವರಾಗಿದ್ದ ಅವಧಿಯಿಂದ ಕಾವೇರಿಯಲ್ಲಿಯೇ ವಾಸ್ತವ್ಯ ಹೂಡಿದ್ದರು.ಆದರೆ, ಸದಾನಂದಗೌಡರು ಅನುಗ್ರಹದಲ್ಲಿ ವಾಸ್ತವ್ಯ ಹೂಡಿದ್ದರು. ಸದ್ಯ ಸಿದ್ದರಾಮಯ್ಯ ಕಾವೇರಿ ಬೇಕು ಎಂದಿರುವುದರಿಂದ ಅನುಗ್ರಹ ನಿವಾಸ ಖಾಲಿ ಉಳಿಯಲಿದೆ.

ಕಾರು ಕೊಡಿ : ನಾಲ್ವರು ಮಾಜಿ ಸಚಿವರಿಗೆ ಸರ್ಕಾರಿ ಕಾರುಗಳನ್ನು ಹಿಂದಿರುಗಿಸುವಂತೆ ಮೌಖಿಕ ಸೂಚನೆ ರವಾನೆಯಾಗಿದೆ. ಉಮೇಶ ಕತ್ತಿ, ವಿಶ್ವೇಶ್ವರ ಹೆಗಡೆ ಕಾಗೇರಿ, ರೇವುನಾಯಕ ಬೆಳಮಗಿ ಹಾಗೂ ಕಳಕಪ್ಪ ಬಂಡಿ ಮಾಜಿ ಸಚಿವರಾದರೂ ಸರ್ಕಾರಿ ಕಾರುಗಳನ್ನು ಬಳಸುತ್ತಿದ್ದಾರೆ. ಆದ್ದರಿಂದ ಅವುಗಳನ್ನು ತಕ್ಷಣ ಹಿಂದಿರುಗಿಸುವಂತೆ ಸೂಚನೆ ರವಾನೆಯಾಗಿದೆ.

English summary
Chief Minister Siddaramaiah is wish to move for Cauvery, a government bungalow on Kumara Krupa Road. Currently, former CM Jagadish Shettar is occupying the bungalow. The Department of Personnel and Administrative Reforms directed to Jagadish Shettar to shift from bungalow within Three months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X