ಸಂಪುಟ ವಿಸ್ತರಣೆ : ದೆಹಲಿ ತಲುಪಿದ ಪರಮೇಶ್ವರ್

ಬೆಂಗಳೂರು, ಮೇ 14 :ಸಚಿವ ಸಂಪುಟ ವಿಸ್ತರಣೆ ಕುರಿತು ಹೈ ಕಮಾಂಡ್ ನಾಯಕರ ಜೊತೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ದೆಹಲಿಗೆ ತೆರಳಿದ್ದಾರೆ. ಸೋನಿಯಾ ಗಾಂಧಿ ಬುಲಾವ್ ಹಿನ್ನೆಲೆಯಲ್ಲಿ ಪರಮೇಶ್ವರ್ ಮಂಗಳವಾರ ಬೆಳಗ್ಗೆ ದೆಹಲಿ ತಲುಪಿದ್ದಾರೆ.

ಮೂವತ್ತಕ್ಕೂ ಅಧಿಕ ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಸಚಿವ ಸಂಪುಟ ವಿಸ್ತರಣೆ ಮಾಡುವುದು ಹೈಕಮಾಂಡ್ ನಾಯಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಮುಖ ಖಾತೆಗಳಿಗೆ ಆಕಾಂಕ್ಷಿಗಳು ಹೆಚ್ಚಾಗಿದ್ದು, ಖಾತೆ ಹಂಚಿಕೆ ಬಗ್ಗೆ ಪರಮಶ್ವರ್ ವರಿಷ್ಠರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಟಿಕೆಟ್ ಹಂಚಿಕೆಯಲ್ಲಿ ಕಳಂಕಿತರನ್ನು ದೂರವಿಟ್ಟಿದ್ದ ಕಾಂಗ್ರೆಸ್ ಸಂಪುಟ ವಿಸ್ತರಣೆಯಲ್ಲೂ ಅದೇ ತಂತ್ರ ಅನುಸರಿಸಲು ಸಜ್ಜಾಗಿದ್ದಾರೆ. ಆದ್ದರಿಂದ ಕಳಂಕಿತರಿಗೆ ಸಂಪುಟದಲ್ಲಿ ಸ್ಥಾನ ನೀಡದಿರಲು ಹೈ ಕಮಾಂಡ್ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಯಾವ ಶಾಸಕರ ಭೇಟಿಗೂ ಸಮಯಾವಕಾಶ ನೀಡದ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಇಂದು ಮಧ್ಯಾಹ್ನ ಪರಮೇಶ್ವರ್ ಜೊತೆ ಸಭೆ ನಡೆಸುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವ ವಚನ ಸ್ವೀಕರಿಸುತ್ತಿದ್ದಂತೆ ಕರ್ನಾಟಕದ ರಾಜಕಾರಣ ದೆಹಲಿಗೆ ಶಿಫ್ಟ್ ಆಗಿತ್ತು. ಸಚಿವ ಸ್ಥಾನದ ಆಕಾಂಕ್ಷಿಗಳು ಮುಖ್ಯಮಂತ್ರಿಗಿಂತ ಮೊದಲೇ ದೆಹಲಿಗೆ ತೆರಳಿ, ಲಾಭಿ ಆರಂಭಿಸಿದ್ದರು. ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲೇ ಉಳಿದಿದ್ದು ನಾಳೆ ದೆಹಲಿಗೆ ತೆರಳುವ ಸಾಧ್ಯತೆ ಇದೆ.

ಕೇಂದ್ರ ಸಚಿವರಾದ ಎಂ. ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಬೆಂಬಲಿಗರು ಅವರ ಜೊತೆಯೇ ಸೋಮವಾರ ದೆಹಲಿಗೆ ತೆರಳಿದ್ದು, ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟಿದ್ದಾರೆ. ಹೈ ಕಮಾಂಡ್ ನಾಯಕರು ಇಂದು ಸಚಿವ ಸಂಪುಟ ವಿಸ್ತರಿಸುವ ಬಗ್ಗೆ ಸಭೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಪ್ರಮುಖ ಖಾತೆಗಳಿಗೆ ಬೇಡಿಕೆ : ಗೃಹ, ಸಾರಿಗೆ, ನಗರಾಭಿವೃದ್ಧಿ, ಶಿಕ್ಷಣ, ಕಂದಾಯ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ವಿದ್ಯುತ್ ಸೇರಿದಂತೆ ಪ್ರಮುಖ ಖಾತೆಗಳ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಇದರಿಂದ ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ಜೊತೆ ಚರ್ಚಿಸಿ ಸಂಪುಟ ವಿಸ್ತರಣೆ ನಡೆಸುವ ಸಾಧ್ಯತೆ ಇದೆ.

ಇವರು ದೆಹಲಿಗೆ : ಸೋಮವಾರ ಹಿರಿಯ ಮುಖಂಡರಾದ ಟಿ.ಬಿ. ಜಯಚಂದ್ರ, ವೀರಣ್ಣ ಮತ್ತಿಕಟ್ಟಿ, ಡಿ.ಕೆ. ಶಿವಕುಮಾರ್, ಕೆ.ಬಿ. ಕೋಳಿವಾಡ, ರೋಶನ್ ಬೇಗ್ ಸೇರಿದಂತೆ ಅನೇಕರು ದೆಹಲಿ ತಲುಪಿದ್ದಾರೆ. ಯಾರಿಗೆ ಯಾವ ಖಾತೆ ಎಂಬುದು ಹೈಮಾಂಡ್ ನಾಯಕರ ತೀರ್ಮಾನದ ನಂತರ ತಿಳಿದು ಬರಲಿದೆ.

ನನಗೆ ಗ್ರಾಮೀಣಾಭಿವೃದ್ಧಿ ಕೊಡಿ : ನನಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಬೇಡ ಗ್ರಾಮೀಣಾಭಿವೃದ್ಧಿ ಖಾತೆ ನೀಡಿ ಎಂದು ಹಿರಿಯ ನಾಯಕಿ ಮೋಟಮ್ಮ ಬೇಡಿಕೆ ಇಟ್ಟಿದ್ದಾರೆ. ಸಹಕಾರ ಖಾತೆ ನನಗೆ ಬೇಕು ಎಂದು ಹಿರಿಯ ನಾಯಕ ಟಿ.ಬಿ.ಜಯಚಂದ್ರ ಒತ್ತಾಯ ಮಾಡುತ್ತಿದ್ದಾರೆ.

ಮಾಜಿ ಸಚಿವರೇ ಹೆಚ್ಚು : ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಎಚ್.ಕೆ. ಪಾಟೀಲ್, ಕಾಗೋಡು ತಿಮ್ಮಪ್ಪ, ಆರ್.ವಿ. ದೇಶಪಾಂಡೆ, ರಾಮಲಿಂಗಾರೆಡ್ಡಿ, ಡಿ.ಕೆ. ಶಿವಕುಮಾರ್, ಖಮರುಲ್ ಇಸ್ಲಾಂ, ರೋಶನ್ ಬೇಗ್ ಸೇರಿದಂತೆ 20ಕ್ಕೂ ಹೆಚ್ಚು ಹಿರಿಯ ನಾಯಕರಿದ್ದು, ಇವರು ಮಾಜಿ ಸಚಿವರಾಗಿದ್ದಾರೆ.

ಇವರ ಜೊತೆಗೆ ಯುವಕರಿಗೆ ಮತ್ತು ಹೊಸದಾಗಿ ಶಾಸಕರಾಗಿ ಆಯ್ಕೆ ಯಾದವರಿಗೆ ಸಚಿವ ಸ್ಥಾನ ನೀಡಬೇಕಾಗಿದೆ. ಆದ್ದರಿಂದ, ಸಂಪುಟ ರಚನೆಯ ಕಸರತ್ತು ಸಿಎಂ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+