ಶೋಭಾ ಸವಾಲು, ಕೂಡಂಕುಳಂಗೆ ಗ್ರೀನ್ ಸಿಗ್ನಲ್

ಇದರಿಂದ ಕರ್ನಾಟಕಕ್ಕೆ ಏನು ಲಾಭ? ಏರುತ್ತಿರುವ ವಿದ್ಯುತ್ ದರ ಇಳಿಕೆ ಸಾಧ್ಯವೇ? ವಿದ್ಯುತ್ ಕ್ಷಾಮ ನೀಗುತ್ತದೆಯೇ? ಅಂದಿನ ಇಂಧನ ಸಚಿವೆ ಶೋಭಾ ಅವರು ಹಾಕಿದ್ದ ಸವಾಲು ಏನು? ಮುಂದೆ ಓದಿರಿ...
ಸೋಮವಾರ(ಮೇ.7) ವಿವಾದಿತ ಅಣು ಸ್ಥಾವರದ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 'ಸ್ಥಾವರ ಸುರಕ್ಷಿತವಾಗಿದೆ. ಅದರ ಸುರಕ್ಷತೆ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಆತಂಕ ಬೇಡ. ಈ ಬಗ್ಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದು ನ್ಯಾ.ಕೆ.ಎಸ್.ರಾಧಾಕೃಷ್ಣನ್ ಮತ್ತು ನ್ಯಾ.ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ.
'ಈ ಪರಮಾಣು ಸ್ಥಾವರ ದೇಶದ ಆರ್ಥಿಕ ಬೆಳವಣಿಗೆಗೆ ಅಗತ್ಯ. ದೇಶದ ಈಗಿನ ಮತ್ತು ಮುಂದಿನ ಪೀಳಿಗೆಗೆ ಶುದ್ಧ ಮತ್ತು ಮಿತವ್ಯಯಕಾರಿ ಇಂಧನ ಒದಗಿಸಲು ಅಣು ಸ್ಥಾವರಗಳ ಅಗತ್ಯವಿದೆ 'ಎಂದು ನ್ಯಾಯಪೀಠ ಪ್ರತಿಪಾದಿಸಿದೆ. ಜತೆಗೆ ಪರಮಾಣು ಸ್ಥಾವರ ಆರಂಭಿಸಲು 15 ನಿಯಮಗಳನ್ನೂ ಸುಪ್ರೀಂಕೋರ್ಟ್ ವಿಧಿಸಿದೆ.
Atomic Energy Regulatory Board (AERB), Nuclear Power Corporation of India Ltd (NPCIL) ಹಾಗೂ Department of Atomic Energy (DAE) ಕೂಡಂಕುಳಂನ ಅಣು ಸ್ಥಾವರಕ್ಕೆ ಅಂತಿಮ ಕ್ಲಿಯರೆನ್ಸ್ ನೀಡುವ ತನಕ ವಿದ್ಯುತ್ ಉತ್ಪಾದನೆ ಶುರು ಮಾಡುವಂತಿಲ್ಲ ಎಂದು ಕೂಡಾ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಶೋಭಾ ಕರಂದ್ಲಾಜೆ ಸವಾಲು: ತಮಿಳುನಾಡಿನ ಕೂಡಂಕುಳಂ ವಿದ್ಯುತ್ ಯೋಜನೆಯಡಿ ಒಕ್ಕೂಟ ವ್ಯವಸ್ಥೆಯ ನಿಯಮದಂತೆ ರಾಜ್ಯಕ್ಕೆ ಸಿಗಬೇಕಾದ 220 ಮೆಗಾವ್ಯಾಟ್ ವಿದ್ಯುತ್ತನ್ನು ನೀಡದಿದ್ದಲ್ಲಿ ಕೈಗಾ ವಿದ್ಯುತ್ ಸ್ಥಾವರದ ಸಂಪೂರ್ಣ ವಿದ್ಯುತ್ತನ್ನು ರಾಜ್ಯಕ್ಕೆ ನೀಡುವಂತೆ ಕೇಂದ್ರವನ್ನು ಒತ್ತಾಯಿಸಲಾಗುವುದು ಎಂದು ಅಂದಿನ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದರು.
ಕೂಡಂಕುಳಂ ಯೋಜನೆಯಡಿ ಉತ್ಪಾದಿಸಲಾಗುವ 1300 ಮೆಗಾವ್ಯಾಟ್ ವಿದ್ಯುತ್ ಕೂಡಾ ತಮಿಳುನಾಡಿಗೆ ನೀಡಲಾಗುವುದು ಎಂದು ಕೇಂದ್ರದ ವಿದ್ಯುತ್ ಸಚಿವ ನಾರಾಯಣ ಸ್ವಾಮಿ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
ನಿಯಮದ ಪ್ರಕಾರ ವಿದ್ಯುತ್ ಸ್ಥಾವರ ಇರುವ ರಾಜ್ಯಕ್ಕೆ ಉತ್ಪಾದನೆಯ ಶೇ 50 ರಷ್ಟು ಉತ್ಪನ್ನ ಸೇರಲಿದ್ದು, ಉಳಿದದ್ದು ಬೇಡಿಕೆ ಆಧಾರದ ಮೇಲೆ ಕೇಂದ್ರ ಸರ್ಕಾರ ಹಂಚಿಕೆ ಮಾಡಲಿದೆ. ಕೂಡಂಕುಳಂ ವಿದ್ಯುತ್ ಸ್ಥಾವರದಿಂದ 1,300ಮೆ.ವ್ಯಾ ಉತ್ಪಾದನೆಯಾಗುತ್ತಿದ್ದು, ಕರ್ನಾಟಕ 220 ಮೆ.ವ್ಯಾ ಹಾಗೂ ಕೇರಳ 133 ಮೆ.ವ್ಯಾ ವಿದ್ಯುತ್ ಬೇಡಿಕೆ ಇಟ್ಟಿದೆ.
2014ರ ವೇಳೆಗೆ ದೇಶದಲ್ಲಿ ಗುಜರಾತ್ ನಂತೆ ಕರ್ನಾಟಕ ಕೂಡಾ ವಿದ್ಯುತ್‌ನಲ್ಲಿ ಸ್ವಾವಲಂಬಿ ರಾಜ್ಯವಾಗಲಿದೆ ಎಂದು ಶೋಭಾ ಅವರು ಕನಸು ಕಂಡಿದ್ದರು. ಜುಲೈ 2011 ರಿಂದ ಜೂನ್ 2012ಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಶೇ 24 ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಇದೇ ರಾಷ್ಟ್ರದ ಇತರೆಡೆ ಶೇ 12 ರಿಂದ 13ರಷ್ಟಿದೆ. ಅನಗತ್ಯವಾಗಿ ವಿದ್ಯುತ್ ಪೊಲಾಗುವುದನ್ನು ಕಡಿಮೆ ಮಾಡಿ, ಪರ್ಯಾಯ ಇಂಧನ ಬಳಕೆಯತ್ತ ಕೂಡಾ ಗಮನಹರಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದೇವೆ ಎಂದು ಶೋಭಾ ಹೇಳಿದ್ದರು.












Click it and Unblock the Notifications