ಅರಮನೆ ಮೈದಾನದಲ್ಲಿ ಸೋನಿಯಾ ಮೇನಿಯಾ
ಬೆಂಗಳೂರು/ಗುಲ್ಬರ್ಗಾ, ಮೇ 2: ಬೆಂಗಳೂರಿಗೆ ಶ್ರೀಮಂತ ಇತಿಹಾಸವಿದೆ. ಇಲ್ಲಿ ಸಹಬಾಳ್ವೆ ಇದೆ. ಆದರೆ, ಬಿಜೆಪಿ ಆಡಳಿತ ಯಂತ್ರ ಕುಸಿದು ಎಲ್ಲವೂ ಗೊಂದಲಮಯವಾಗಿದೆ. ಈಗ ಬದಲಾವಣೆ ಕಾಲ ಬಂದಿದೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.
ಕಳೆದ ಐದು ವರ್ಷದಲ್ಲಿ 88 ಸಾವಿರ ಕೋಟಿ ರು ಅನುದಾನವನ್ನು ಕರ್ನಾಟಕಕ್ಕೆ ನೀಡಲಾಗಿದೆ.ಆದರೆ, ಕರ್ನಾಟಕದ ಬಿಜೆಪಿ ಸರ್ಕಾರ ಎಲ್ಲವನ್ನೂ ಹಾಳುಗೆಡವಿದೆ. ಕರ್ನಾಟಕ ಸಮಗ್ರ ಅಭಿವೃದ್ಧಿ ಕಾಣಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಸೋನಿಯಾ ಗಾಂಧಿ ಅವರು ನಗರದ ಅರಮನೆ ಮೈದಾನದಲ್ಲಿ ಕಿಕ್ಕಿರಿದ ಸಭೆಯಲ್ಲಿ ಹೇಳಿದರು.
ಹೆಚ್ಚು ಕಡಿಮೆ ಗುಲ್ಬರ್ಗಾದ ಪ್ರಚಾರ ಭಾಷಣ ಬೆಂಗಳೂರಿನಲ್ಲೂ ಪುನಾರವರ್ತನೆಯಾಯಿತು ಎಂದರೆ ತಪ್ಪಾಗಲಾರದು. ಬಿಜೆಪಿ ಭ್ರಷ್ಟಾಚಾರ, ಕಾಂಗ್ರೆಸ್ ಕೊಡುಗೆ, ಒಂದಿಷ್ಟು ಭರವಸೆ ಇದೇ ಭಾಷಣದ ಹೈಲೇಟ್ಸ್ ಆಗಿತ್ತು.
ಇದಕ್ಕೂ ಮುನ್ನ ಸೋನಿಯಾ ಗಾಂಧಿ ಅವರು ಗುಲ್ಬರ್ಗಾದ ನೂತನ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಬೃಹತ್ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. ಆರಂಭದಲ್ಲಿ ಕರ್ನಾಟಕ ಸಹೋದರ, ಸಹೋದರಿಯರೇ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.
ಮಾತು ಮುಂದುವರೆಸಿದ ಸೋನಿಯಾ, ಬಿಜೆಪಿ ಸರ್ಕಾರ ಕಳೆದ 5 ವರ್ಷಗಳಲ್ಲಿ ನಿರೀಕ್ಷೆಗೆ ಮೀರಿದಷ್ಟು ಭ್ರಷ್ಟಾಚಾರ ನಡೆಸಿದೆ. ಜನ ಈ ಅನೈತಿಕ ಆಡಳಿತದಿಂದ ಬೇಸರಗೊಂಡಿದ್ದಾರೆ. ಕಾಂಗ್ರೆಸ್ ನಿಂದ ಮಾತ್ರ ಸ್ವಚ್ಛ ಹಾಗೂ ಸಮರ್ಥ ಆಡಳಿತ ನೀಡಲು ಸಾಧ್ಯ ಎಂದು ಹೇಳಿದರು.
ಕಾಂಗ್ರೆಸ್ಸಿಗೆ ಸ್ವಾತಂತ್ರ್ಯ ಹೋರಾಟದ ಇತಿಹಾಸವಿದೆ. ಅಂದಿನಿಂದ ಇಂದಿನವರೆಗೂ ಜನರ ಅಭಿವೃದ್ಧಿಯೇ ಪಕ್ಷದ ಧ್ಯೇಯ. ಈವರೆಗೂ ಜಾರಿಗೊಂಡಿರುವ ಎಲ್ಲ ಕಾರ್ಯಕ್ರಮಗಳು ಜನರ ಅಭಿವೃದ್ಧಿಯನ್ನು ಕೇಂದ್ರಿಕೃತಗೊಂಡಿವೆ. ಬಿಜೆಪಿ ಆಡಳಿತಕ್ಕೆ ಬಂದರೆ ಕೆಲವು ಸಂಸ್ಥೆಗಳ ಮತ್ತು ವ್ಯಕ್ತಿಗಳ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದು ಸೋನಿಯಾ ಕಿಡಿಕಾರಿದರು.
ಕೇಂದ್ರದ ಯುಪಿಎ ಸರ್ಕಾರ ಹೈದರಾಬಾದ್-ಕರ್ನಾಟಕ ಭಾಗದ 6 ಜಿಲ್ಲೆಗಳಿಗೆ ಸ್ವಾಯತ್ತತ ಸ್ಥಾನಮಾನ ನೀಡುವ ಸಲುವಾಗಿ ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಜಾರಿಗೆ ತಂದಿದೆ. ಈ ಭಾಗದ ಜನರಿಗೆ ಇದು ವರದಾನವಾಗಲಿದೆ ಎಂದು ಹೇಳಿದರು. ಅಂತಿಮವಾಗಿ ಜೈ ಹಿಂದ್ ಜೈ ಕರ್ನಾಟಕ ಎಂದು ಸೋನಿಯಾ ಭಾಷಣ ಮುಗಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ್ ಖರ್ಗೆ, ಸಂವಿಧಾನ ತಿದ್ದುಪಡಿ ಮೂಲಕ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸ್ವಾಯತ್ತತ ಸ್ಥಾನಮಾನ ನೀಡಿರುವ ನಿರ್ಧಾರದಿಂದ 1.40 ಕೋಟಿ ಜನರ ಭವಿಷ್ಯ ಉಜ್ವಲಗೊಂಡಿದೆ ಎಂದರು.