ರೇಪ್, ಹತ್ಯೆ, ಮರಾಠ ಬರಹ: ಬೆಳಗಾವಿ ಉದ್ವಿಗ್ನ

ಕ್ರೌರ್ಯದ ಪರಮಾವಧಿಯೆಂದರೆ ಯುವತಿಯ ಬಲ ತೊಡೆಯ ಮೇಲೆ 'ಮರಾಟಾ' ಎಂದು ಮರಾಠಾ ಭಾಷೆಯಲ್ಲಿ ಗೀಚಲಾಗಿದೆ.
ಮೋದ್ಗಾ ಗ್ರಾಮದ ನಿವಾಸಿ ಶಿವಲೀಲಾ ಬಾಯಿ ಪಾಟೀಲ (20) ಹತ್ಯೆಯಾದ ವಿದ್ಯಾರ್ಥಿನಿ. ಈಕೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿಯಾಗಿದ್ದು, ನಿನ್ನೆ ಶುಕ್ರವಾರ ಕಾಲೇಜಿಗೆ ಹೋಗಿದ್ದವಳು ಮನೆಗೆ ವಾಪಸಾಗಿರಲಿಲ್ಲ.
ಮನೆಯವರು ಈಕೆಯ ಹುಡುಕಾಟ ನಡೆಸಿದಾಗ ಬೆಳಗಾವಿಯ ಸೂಳೆಬಾವಿಯಲ್ಲಿ ಮೃತ ದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹತ್ಯೆಗೆ ನಿಖರ ಮಾಹಿತಿ ಹಾಗೂ ಕೊಲೆ ನಡೆಸಿದವರ ಬಗ್ಗೆ ತಕ್ಷಣಕ್ಕೆ ಸುಳಿವು ಸಿಕ್ಕಿಲ್ಲ. ಈ ಸಂಬಂಧ ಮಾರಿಹಾಳ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.
ಈ ಮಧ್ಯೆ, ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿದ್ದು, ಆಕೆಯನ್ನು ಸಾಯಿಸಲಾಗಿದೆ. ಆಕೆಯ ಮೈಮೇಲೆ ಮರಾಠಾ ಎಂದು ಬರೆಯಲಾಗಿದೆ. ಇದು ಮರಾಠಿಗರ ಕುಕೃತ್ಯ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದು ಬೆಳಗಾವಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಹೆದ್ದಾರಿಗೆ ಅಂಟಿಕೊಂಡಿರುವ ಮೋದ್ಗಾದಲ್ಲಿ ಗ್ರಾಮಸ್ಥರು ತೀವ್ರ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇಂದು ಮಧ್ಯಾಹ್ನದಿಂದ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು, ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಎಸ್ಪಿ ಸಂದೀಪ್ ಪಾಟೀಲ್ ಸ್ಥಳದಲ್ಲಿ ಮೊಕ್ಕಾ ಹೂಡಿದ್ದು, ಬಿಗಿ ಭದ್ರತೆ ಹಾಕಿದ್ದಾರೆ.












Click it and Unblock the Notifications