ಸ್ಫೋಟಕ್ಕೆ ಬಳಸಿದ ಸುಜುಕಿ ಬೈಕು ಕದ್ದಿರುವುದು
ಬೆಂಗಳೂರು, ಎ.17: ಮಲ್ಲೇಶ್ವರಂ ಬಾಂಬ್ ಸ್ಫೋಟಕ್ಕೆ ಬಳಸಿದ ಸುಜುಕಿ ಬೈಕು ಕದ್ದಿರುವುದು ಎಂದು ತಿಳಿದುಬಂದಿದೆ. ಈ ಹಿಂದೆ ತಿಳಿಸಿದಂತೆ ಸದರಿ ಬೈಕು ತಮಿಳುನಾಡು ನೋಂದಣೆಯನ್ನು ಹೊಂದಿತ್ತು.
ಅದರ ಬೆನ್ನುಹತ್ತಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ನೋಂದಣಿ ವಿಚಾರಣೆ ಮಾಡಲಾಗಿ ಅದು ನಕಲಿ ನೋಂದಣಿ ಸಂಖ್ಯೆ (ಟಿಎನ್ ಆರ್ 3767 ) ಎಂದು ತಿಳಿದುಬಂದಿದೆ. ಆದರೆ ಬೈಕು ಮೂಲತಃ ಆಂಧ್ರಪ್ರದೇಶದ ಹೈದರಾಬಾದಿನದ್ದು ಎಂದು ತಿಳಿದುಬಂದಿದೆ.

ಆದರೆ ಮಲ್ಲೇಶ್ವರದಲ್ಲಿ ಬಿಜೆಪಿ ಕಚೇರಿಯ ಎದುರು ಸ್ಫೋಟ ಸಂಭವಿಸಿದ ತರುವಾಯ ನಗರದಲ್ಲಿ ಬೇರೆಲ್ಲೂ ಭಯೋತ್ಪಾದಕ ದಾಳಿ ನಡೆದಿಲ್ಲ. ಹೆಬ್ಬಾಳದಲ್ಲಿ ನಡೆದಿರುವುದು ಸಿಲಿಂಡರ್ ಸ್ಫೋಟವಷ್ಟೇ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಖಚಿತಪಡಿಸಿದ್ದಾರೆ.
ಈ ಮಧ್ಯೆ, ಮಲ್ಲೇಶ್ವರದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮೂವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಮಧ್ಯೆ ಬೆಂಗಳೂರು ಕಾರು ಬಾಂಬ್ ಸ್ಫೋಟದ ಬಗ್ಗೆ ಕೋಲ್ಕೊತ್ತಾದಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶೀಂಧೆ ಅವರು ಕುಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ಇದು ಉಗ್ರರ ಕೈವಾಡ ಎಂದು ತಿಳಿಸಿದ್ದಾರೆ. ಸ್ಫೋಟದ ಕುರಿತು ತನಿಖೆಗೆ ಆದೇಶಿಸಲಾಗಿದೆ. ತನಿಖೆ ಸಂಬಂಧ ಕರ್ನಾಟಕ ಸರಕಾರಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಯಾರನ್ನೂ ಬಂಧಿಸಿಲ್ಲ ಎಂದ ಮೊಹಂತಿ:
ಪೊಲೀಸ್ ಆಯುಕ್ತರುಗಳಾದ ಪ್ರಣಬ್ ಮೊಹಂತಿ ಮತ್ತು ಮುರುಗನ್ ನೇತೃತ್ವದಲ್ಲಿ 2 ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, ಮಲ್ಲೇಶ್ವರದಲ್ಲಿ ನಡೆದ ಕಾರು ಬಾಂಬ್ ಸ್ಫೋಟದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಈ ಮಧ್ಯೆ, ಸ್ಫೋಟದ ಸಂಬಂಧ ಯಾರನ್ನೂ ಬಂಧಿಸಿಲ್ಲ ಎಂದು ಮೊಹಂತಿ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications