ಕಾಂಗ್ರೆಸ್ ನಲ್ಲಿ ಗೊಂದಲವಿಲ್ಲ. ನಾನೇ ಸಿಎಂ

ಭಾನುವಾರ(ಏ.14) ಸುತ್ತೂರು ಮಠ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿ ಹೊರ ಬಂದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಆಶಾವಾದಿಯಾಗಿದ್ದೇನೆ ನನ್ನ ರಾಜಕೀಯ ಜೀವನದಲ್ಲಿ ನಿರಾಶೆಗೆ ಜಾಗವಿಲ್ಲ ಎಂದರು.
ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ. ಜಿ ಪರಮೇಶ್ವರ್ ಸೇರಿದಂತೆ ಹಲವಾರು ನಾಯಕರು ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ವೀರಪ್ಪ ಮೊಯ್ಲಿ ಮಾತ್ರ ನಾನು ಮತ್ತೆ ಸಿಎಂ ಆಗಲ್ಲ, ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದು ನಂತರ ದೆಹಲಿಯಲ್ಲಿ ವಿಶ್ರಮಿಸುತ್ತೇನೆ ಎಂದಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತ್ಯನಾರಾಯಣ ಅವರ ಪರ ಪ್ರಚಾರ ನಡೆಸಿದ ಸಿದ್ದರಾಮಯ್ಯ, ಈ ಕ್ಷೇತ್ರ ನನಗೆ ಮರುಜನ್ಮ ನೀಡಿದೆ. ನನ್ನನ್ನು ಮಾತ್ರ ಗೆಲ್ಲಿಸಿದರೆ ಸಾಲದು, ಮೈಸೂರಿನಲ್ಲಿ ಎಲ್ಲೆಡೆ ಕಾಂಗ್ರೆಸ್ ಬಾವುಟ ಹಾರಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ ಅವರ ಊರು ಸಿದ್ದರಾಮಯನ ಹುಂಡಿಯಲ್ಲಿ ಈಗ ಜಾತ್ರೆ ವಾತಾವರಣ ಸೃಷ್ಟಿಯಾಗಿದ್ದು, ಸಿದ್ದರಾಮಯ್ಯ ಅವರ ಪರ ಪೂಜೆ ಪುನಸ್ಕಾರ ಜೋರಾಗಿ ನಡೆದಿದೆ. ವರುಣಾ ಕ್ಷೇತ್ರದಲ್ಲಿ ಎಷ್ಟೇ ಹಣದ ಹೊಳೆ ಹರಿಯಲಿ. ಕಾಂಗ್ರೆಸ್ ಗೆ ಈ ಬಾರಿ ಜನಬೆಂಬಲ ಸಿಗಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಬಂಡಾಯ ಇಲ್ಲ : ಕಾಂಗ್ರೆಸ್ ಟಿಕೆಟ್ ಗಾಗಿ 10 ರಿಂದ 60 ಜನ ಅಭ್ಯರ್ಥಿಗಳು ಕಾದು ಕುಳಿತಿರುವುದು ನಮ್ಮ ಪಕ್ಷದ ಶಕ್ತಿಯನ್ನು ಎತ್ತಿ ತೋರಿಸುತ್ತಿದೆ. ಟಿಕೆಟ್ ಗಾಗಿ ಸ್ಪರ್ಧೆ ಇರುವುದು ನಿಜವಾದರೂ ಬಂಡಾಯ ಇಲ್ಲ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಿಗೆ ಗಾಳ ಹಾಕಲು ಕಾದು ಕುಂತಿವೆ. ಕಾಂಗ್ರೆಸ್ ಸಮರ್ಥ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸುತ್ತಿದೆ.
ಏ.18ರಿಂದ ಏ.29 ತನಕ ಕಾಂಗ್ರೆಸ್ ಬಿರುಸಿನ ಪ್ರಚಾರವನ್ನು ನಡೆಸಲು ಯೋಜಿಸಲಾಗಿದೆ. ವರುಣಾದಲ್ಲಿ ಏ. 30 ಅಥವಾ ಏ.1ರ ವೇಳೆಗೆ ಮತ್ತೆ ಬರುತ್ತೇನೆ ಎಂದರು. ಈ ನಡುವೆ ಮಹತ್ವದ ಬೆಳವಣಿಗೆಯಲ್ಲಿ 2008ರಲ್ಲಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಮಾಜಿ ಡಿಜಿಪಿ ಎಲ್ ರೇವಣ್ಣಸಿದ್ದಯ್ಯ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಿ ಸಿದ್ದು ಬೆನ್ನ ಹಿಂದೆ ನಿಂತಿದ್ದಾರೆ. ಸದ್ಯಕ್ಕೆ ಸಿದ್ದು ಅವರಿಗೆ ಕೆಜೆಪಿಯ ಕಾಪು ಸಿದ್ದಲಿಂಗಸ್ವಾಮಿ ಮಾತ್ರ ಪ್ರಮುಖ ಸ್ಪರ್ಧಿಯಾಗಿದ್ದಾರೆ.











Click it and Unblock the Notifications