ಮೈಸೂರಿನಲ್ಲಿ ಕಾಂಗ್ರೆಸ್ ಭದ್ರಕೋಟೆಗೆ ಯಾರ ಕನ್ನ?

Mysore district latest updates
ಹೆಚ್ಚು ಕಡಿಮೆ ಮೈಸೂರು ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಭಾವ ಬೆಳೆಸಿಕೊಂಡಿರುವ ಕಾಂಗ್ರೆಸ್ 'ಮುಖ್ಯಮಂತ್ರಿ' (ಸಂಭಾವ್ಯ) ಅಭ್ಯರ್ಥಿ ಅವರ ವಿರುದ್ಧ ತೊಡೆ ತಟ್ಟುವವರು ಯಾರು? ಕೃಷ್ಣರಾಜನಗರ, ಕೃಷ್ಣರಾಜ ಮತ್ತು ಚಾಮರಾಜ ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಪ್ರಭಾವಳಿ ಹಬ್ಬಿಸಿಕೊಂಡಿದೆ. ಆ ಪಕ್ಷದಿಂದ ಆ ಜಾತಿಯ ಅಭ್ಯರ್ಥಿ ಕಣಕ್ಕಿಳಿದಿದ್ದರಿಂದ ಮತವಿಭಜನೆಯಾಗಿ ಗೆಲುವು ನಮಗೇ ಸಿಗಲಿದೆ ಎಂದು ಎಲ್ಲ ಪಕ್ಷಗಳು ಜಾತಿಯ ಲೆಕ್ಕಾಚಾರದಲ್ಲಿ ತೊಡಗಿವೆ. ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸುವ ತಾಕತ್ತು ಯಾವ ಪಕ್ಷಕ್ಕಿದೆ?

ವರುಣಾ

ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದ ಕ್ಷೇತ್ರವಿದು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುತ್ತಿದ್ದಾರೆ. ಇಲ್ಲಿ ಈ ಬಾರಿಯೂ ಖಾದಿ, ನಿವೃತ್ತ ಖಾಕಿಗಳ ಹಣಾಹಣಿ ನಡೆಯುವ ನಿರೀಕ್ಷೆ ಇದೆ. ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿ ಎಂಬ ನಿರೀಕ್ಷೆಯೊಂದಿಗೆ ಮತದಾರರು ಆಶೀರ್ವದಿಸಿದರೆ, ಸಿದ್ದು ಹಾದಿ ಸುಗಮ ಆಗಬಹುದು. ಅಲ್ಲದೆ, ಬಿಜೆಪಿಯಿಂದ ಲಿಂಗಾಯತ ಸಮುದಾಯಕ್ಕೆ ಸೇರಿದ ನಿವೃತ್ತ ಐಪಿಎಸ್ ಅಧಿಕಾರಿ ಎಲ್ ರೇವಣಸಿದ್ದಯ್ಯ ಕಣಕ್ಕೆ ಇಳಿದರೆ ಕೆಜೆಪಿಯ ಮತಗಳು ಇಬ್ಭಾಗವಾಗಿ ಅದು ಕಾಂಗ್ರೆಸ್‌ಗೆ ಅನುಕೂಲವಾಗಬಹುದು. ಕ್ಷೇತ್ರದ ಲಿಂಗಾಯತ ಮತಗಳು ಕೆಜೆಪಿ ಪರ ಸಂಪೂರ್ಣವಾಗಿ ನಿಂತು, ಜೊತೆಗೆ ಪರಿಶಿಷ್ಟ ಜಾತಿ ಮತಗಳು ಇಬ್ಭಾಗವಾದರೆ ಕೆಜೆಪಿಗೆ ಅನುಕೂಲ.

ಸಿದ್ದು ಗೆದ್ದರೆ ಖರ್ಗೆ ಸಿಎಂ ಆಗೋದಕ್ಕೆ ಅಡ್ಡಗಾಲು ಹಾಕುತ್ತಾರೆ ಎಂಬ ಕಾರಣಕ್ಕೆ ಪರಿಶಿಷ್ಟ ಜಾತಿಯ ಮತಗಳು ಇಬ್ಬಾಗ ಆಗಬಹುದು ಅನ್ನೋ ಲೆಕ್ಕಾಚಾರವೂ ಇದೆ. ಸಿದ್ದರಾಮಯ್ಯ ಅವರ ಕಾಲೆಳೆಯಲು ಜೆಡಿಎಸ್ ಸಹ ಹಿಂದೆ ಬಿದ್ದಿಲ್ಲ. ಒಂದು ದೊಡ್ಡ ವೋಟ್ ಬ್ಯಾಂಕ್ ಆಗಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ನಿವೃತ್ತ ಪೊಲೀಸ್ ಅಧಿಕಾರಿ ಚೆಲುವರಾಜ್ ಅವರನ್ನೇ ಕಣಕ್ಕಿಳಿಸುತ್ತಿದೆ. ಇದರ ನಡುವೆ ಯಡಿಯೂರಪ್ಪ ಅವರ ಶಿಷ್ಯ ಎಂದೇ ಗುರುತಿಸಿಕೊಂಡಿರೋ ಕಾ.ಪು ಸಿದ್ದಲಿಂಗಸ್ವಾಮಿ ದಾನ, ಧರ್ಮ ಹಾಗೂ ಅಭಿವೃದ್ದಿ ಹೆಸರಿನಲ್ಲಿ ಕ್ಷೇತ್ರದುದ್ದಕ್ಕೂ ಚೆಲ್ಲಿರೋ ಕಾಸು ಯಾರ‍್ಯಾರನ್ನು ಏನೇನು ಮಾಡುತ್ತೋ? ಅನ್ನೋ ಕುತೂಹಲವೂ ಇದೆ. ಜೆಡಿಎಸ್ ತೊರೆದಾಗ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಚೆಲ್ಲಿದ ಹಣ, ಜಾತಿ ಬಲಕ್ಕಿಂತ ಇದೆಲ್ಲ ದೊಡ್ಡದೇನಲ್ಲ ಗೆಲ್ತೇನೆ ಅನ್ನೋ ಕಾನ್ಪಿಡೆನ್ಸು ಸಿದ್ದರಾಮಯ್ಯ ಅವರದು.

ಚಾಮರಾಜ

ಬಿಜೆಪಿ ಶಾಸಕರಾಗಿದ್ದರೂ ಬಿಜೆಪಿ ಹಾಗೂ ಅದರ ನಾಯಕರ ವಿರುದ್ಧವೇ ಟೀಕಿಸುವ ಮೂಲಕ ರಾಜ್ಯಾದ್ಯಂತ ಪ್ರಸಿದ್ಧರಾಗಿರುವ ಶಂಕರಲಿಂಗೇಗೌಡ ಕ್ಷೇತ್ರವಿದು. ಕಳೆದ 4 ಬಾರಿಯಿಂದ ಸತತ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರ ಪ್ರಾಬಲ್ಯ ಇದೆ. ಬಿಜೆಪಿಯಿಂದ ಶಂಕರಲಿಂಗೇಗೌಡರ ಮಗ ನಂದೀಶ್ ಪ್ರೀತಂ ಅವರಿಗೆ ಟಿಕೆಟ್ ಸಿಕ್ಕರೆ, ಅಪ್ಪ-ಮಗನ ನಡುವೆ ಸ್ಪರ್ಧೆ ಏರ್ಪಟ್ಟು ಇಡೀ ರಾಜ್ಯದ ಗಮನ ಸೆಳೆಯಲಿರುವ ಕ್ಷೇತ್ರ ಇದಾಗಲಿದೆ. ಶಂಕರಲಿಂಗೇಗೌಡ ಜೆಡಿಎಸ್ ಸೇರಿರುವುದರಿಂದ ಒಕ್ಕಲಿಗರ ಮತ ಜೆಡಿಎಸ್ ಕಡೆಗೆ ಒಗ್ಗೂಡಬಹುದೆಂಬ ನಿರೀಕ್ಷೆ ಗೌಡರದು.

ಎರಡು ಬಾರಿ ಸೋತ ಅನುಕಂಪ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಎದ್ದಿರುವ ಅಲೆ ತಮಗೆ ಅನುಕೂಲ ಮಾಡಲಿದೆ ಅನ್ನೋದು ಕಾಂಗ್ರೆಸ್‌ನ ಅಭ್ಯರ್ಥಿ ವಾಸು ಅವರದು. ಇನ್ನು ನಾಲ್ಕು ಬಾರಿ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿರೋ ಕಾರಣ, ಈ ಬಾರಿಯೂ ಈ ಕ್ಷೇತ್ರ ಬಿಜೆಪಿ ವಶಕ್ಕೆ ಬರುತ್ತೆ ಅನ್ನೋದು ಬಿಜೆಪಿ ಲೆಕ್ಕಚಾರ. ಬಿ ನಾಗೇಂದ್ರ ಅವರನ್ನು ಬಿಜೆಪಿ ಇಲ್ಲಿ ಕಣಕ್ಕಿಳಿಸಿದೆ. ಕಾಯಿನ್ ಬಾಕ್ಸ್‌ನಿಂದ ಕಾಲ್ ಮಾಡಿ ಕಷ್ಟ ಹೇಳ್ಕೊಂಡ್ ಕೂಡ್ಲೆ ಎದುರಿಗೆ ಹಾಜರಾಗಿ ಕಷ್ಟ ಕೇಳಿ ಫೇಮಸ್ಸಾಗಿರೋ ಶಂಕರಲಿಂಗೇಗೌಡರು ಓವರ್ ಕಾನ್ಪಿಡೆನ್ಸ್‌ನಲ್ಲಿದ್ದಾರೆ. ಕಾಂಗ್ರೆಸ್ ಅಲೆ, ವಾಸು ಮೇಲಿನ ಅನುಕಂಪ ದೊಡ್ಡದಾದ್ರೆ ಶಂಕರಲಿಂಗೇಗೌಡರು ಗೆಲ್ಲಲು ತಿಣುಕಾಡಲೇಬೇಕಿದೆ.

ಕೃಷ್ಣರಾಜ

ಮೈಸೂರು ಅರಮನೆ ಇರುವ ಕೃಷ್ಣರಾಜ ಕ್ಷೇತ್ರವನ್ನು ಸಚಿವ ರಾಮದಾಸ್ ಮೂರು ಬಾರಿ ಪ್ರತಿನಿಧಿಸಿದ್ದಾರೆ. ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಇವರು ಒಂದು ಬಾರಿ ಸೋತಿದ್ದಾರೆ. ಬ್ರಾಹ್ಮಣರು ತಮ್ಮ ಬೆನ್ನಿಗೆ ಸಂಪೂರ್ಣವಾಗಿ ನಿಲ್ಲೋ ವಿಶ್ವಾಸ ಹಾಗೂ ಸಚಿವರಾಗಿ ತಾವು ಮಾಡಿದ ಅಭಿವೃದ್ಧಿ ಕೆಲಸಗಳು ತಮ್ಮ ಕೈ ಹಿಡಿಯಬಹುದು ಎಂಬ ನಿರೀಕ್ಷೆ ರಾಮದಾಸ್‌ರಲ್ಲಿದೆ. ಆಡಳಿತ ವಿರೋಧಿ ಅಲೆಯ ಲಾಭ ಹಾಗೂ ಬ್ರಾಹ್ಮಣ ಸಮುದಾಯದ ಎಚ್.ವಿ. ರಾಜೀವ್ ಕೆಜೆಪಿ ಅಭ್ಯರ್ಥಿಯಾಗೋ ಮೂಲಕ ಬಹುಸಂಖ್ಯಾತ ಬ್ರಾಹ್ಮಣ ಮತದಾರರನ್ನು ವಿಭಜಿಸುವ ಹಿನ್ನೆಲೆಯಲ್ಲಿ ತಮಗೆ ಗೆಲುವ ಸಿಗಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ.

ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ ಎಂದೇ ಗುರುತಿಸಿಕೊಂಡಿರೋ ಕುರುಬ ಸಮುದಾಯದ ಎಸ್.ಟಿ. ಸೋಮಶೇಖರ್ ಒಮ್ಮೆ ಇದೇ ಕ್ಷೇತ್ರದಲ್ಲಿ ರಾಮದಾಸ್ ಅವರನ್ನು ಸೋಲಿಸಿದ ಇತಿಹಾಸ ಇದೆ. ಸೋಮಶೇಖರ್ ಸ್ಪರ್ಧೆ ಖಚಿತವಾಗಿರುವುದರಿಂದ ಕಾಂಗ್ರೆಸ್‌ನ ವಿಶ್ವಕರ್ಮ ಸಮಾಜದ ರಘು ಆಚಾರ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಗ್ಯಾರಂಟಿ. ಇನ್ನೂ ಕೆಜೆಪಿ ಅಭ್ಯರ್ಥಿ ಕೂಡ ಲಿಂಗಾಯತರ ಮತಗಳು ಮತ್ತು ಬ್ರಾಹ್ಮಣರ ಮತಗಳು ಹೆಚ್ಚು ಸಿಗುವ ಲೆಕ್ಕ ಮಾಡಿದ್ದಾರೆ. ಅಲ್ಲದೆ, ಜೆಡಿಎಸ್ ಅಭ್ಯರ್ಥಿ ಪರಿಶಿಷ್ಟ ಜಾತಿಗೆ ಸೇರಿದವರಾಗಿರೋ ಕಾರಣ, ಕಾಂಗ್ರೆಸ್ ಓಟ್ ಬ್ಯಾಂಕ್‌ಗೆ ಅವರು ಕೈ ಹಾಕೋ ಹಿನ್ನೆಲೆಯಲ್ಲಿ ತಮಗೆ ಗೆಲುವು ಖಚಿತ ಅನ್ನೋದು ಕೆಜೆಪಿ ಲೆಕ್ಕಚಾರ. ರಾಮದಾಸ್ ಸಚಿವರಾದರೂ ಒಂದು ಸೋಲಿನ ಕಹಿ ಅನುಭವ ಇರೋದ್ರಿಂದ ಕ್ಷೇತ್ರ ಮರೆಯದೇ ಓಡಾಡಿದ್ದಾರೆ ಮತ್ತು ಒಂದಷ್ಟು ಕೆಲಸವನ್ನೂ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+