ಎರಡನೇ ಪಟ್ಟಿ ಕಸರತ್ತು ಸಿದ್ದು, ಪರಮೇಶ್ವರ್ ದೆಹಲಿಗೆ

ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ವಿದೇಶ ಪ್ರವಾಸದಿಂದ ಸೋಮವಾರ ದೆಹಲಿಗೆ ಮರಳಿದ್ದು, ಮಂಗಳವಾರ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಸಂಜೆ ದೆಹಲಿಗೆ ತೆರಳಲಿದ್ದಾರೆ.
ಈಗಾಗಲೇ ಕಾಂಗ್ರೆಸ್ 177 ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದೆ. ಉಳಿದ 47 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ದೊಡ್ಡ ಸವಾಲಾಗಿದೆ. ಚುನಾವಣಾ ಉಸ್ತುವಾರಿ ಸಮಿತಿ ಅಧ್ಯಕ್ಷ ಎ.ಕೆ.ಆಂಟನಿ ಅವರ ಹೆಗಲಿಗೆ ಅಭ್ಯರ್ಥಿಗಳ ಆಯ್ಕೆ ಕಸರತ್ತಿನ ಜವಾಬ್ದಾರಿ ವಹಿಸಲಾಗಿದೆ.
ಎ.ಕೆ.ಆಂಟನಿ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಅಭ್ಯರ್ಥಿಗಳ ಆಯ್ಕೆಯ ಅಂತಿಮ ಪಟ್ಟಿಯನ್ನು ಸೋನಿಯಾಗಾಂಧಿ ಅವರಿಗೆ ಸಲ್ಲಿಸುವ ಸಾಧ್ಯತೆ ಇದೆ. ಅಭ್ಯರ್ಥಿಗಳ ಪಟ್ಟಿ ಪರಿಶೀಲನೆ ಬಳಿಕ ಏ.10ರಂದು 47 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಯಾಗುವ ಸಂಭವಿದೆ.
ಯಾವ ತನಿಖೆಗೂ ಸಿದ್ದ : ಕಾಂಗ್ರೆಸ್ ಟಿಕೆಗಳನ್ನು ಮಾರಾಟ ಮಾಡಿರುವ ಕುರಿತು ಎಐಸಿಸಿ ತನಿಖೆ ನಡೆಸಲಿ ಪಕ್ಷದೊಳಗಿನ ಯಾವ ತನಿಖೆಗೂ ನಾನು ಸಿದ್ಧ ಎಂದು ಕೆಪಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಗೆಲ್ಲುವ ಅಭ್ಯರ್ಥಿಗಳಿಗೆ ಪಾರದರ್ಶಕವಾಗಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ನನ್ನ ಮೇಲೆ ಆರೋಪಿಸುವವರು ಕೆಪಿಸಿಸಿಗೆ ದೂರು ನೀಡಬಹುದು ಎಂದು ಅವರು ಹೇಳಿದರು.
ಕೇಂದ್ರ ನಾಯಕರ ಮಕ್ಕಳಿಗೆ ಟಿಕೆಟ್ ನೀಡುವುದು ಸೋನಿಯಾಗಾಂಧಿ ಅವರ ನಿರ್ಧಾರಕ್ಕೆ ಬಿಟ್ಟ ವಿಷಯ. ಪ್ರತಿಭಟನೆಗಳನ್ನು ನಿಲ್ಲಿಸದಿದ್ದರೆ ಅಭ್ಯರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪರಮೇಶ್ವರ್ ಎಚ್ಚರಿಕೆ ನೀಡಿದರು.
ಏ.12ರಿಂದ ಪ್ರಚಾರ ಆರಂಭ : ಪಕ್ಷದ ಅಭ್ಯರ್ಥಿಗಳು ಅವರರವರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದಾರೆ. ಏ.12ರಂದು ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಕಾಂಗ್ರೆಸ್ ಅಧಿಕೃತವಾಗಿ ಪ್ರಚಾರ ಕಾರ್ಯ ಆರಂಭಿಸಲಿದೆ ಎಂದು ಪರಮೇಶ್ವರ್ ಹೇಳಿದರು. (ಕಾಂಗ್ರೆಸ್ ಮೊದಲ ಪಟ್ಟಿ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications