ಕಾಂಗ್ರೆಸ್ ಎರಡನೇ ಪಟ್ಟಿ ಏ.10ಕ್ಕೆ ಘೋಷಣೆ

ಶುಕ್ರವಾರ ಮೊದಲ ಪಟ್ಟಿಯಲ್ಲಿ ಹೆಚ್ಚಿನ ಆಕಾಂಕ್ಷಿಗಳಲ್ಲಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಆದರೆ, ಹೆಚ್ಚು ಮಹತ್ವ ಮತ್ತು ಪ್ರಬಲ ಪೈಪೋಟಿ ಎದುರಾಗುವ ಕ್ಷೇತ್ರಗಳ ಆಯ್ಕೆಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಂತಿಮ ನಿರ್ಧಾರಕ್ಕೆ ಬಿಡಲಾಗಿದೆ.
ಸದ್ಯ ಅಮೆರಿಕಾ ಪ್ರವಾಸದಲ್ಲಿರುವ ಸೋನಿಯಾ ಗಾಂಧಿ ಸೋಮವಾರ ದೆಹಲಿಗೆ ಮರಳುವ ಸಾಧ್ಯತೆ ಇದೆ. ನಂತರ ಅವರೊಂದಿಗೆ ಚರ್ಚಿಸಿ ಎರಡನೇ ಪಟ್ಟಿ ಅಂತಿಮಗೊಳಿಸಲು ನಿರ್ಧರಿಸಲಾಗಿದೆ. ಕೇಂದ್ರ ನಾಯಕರ ಮಕ್ಕಳಿಗೆ ಟಿಕೆಟ್ ನೀಡುವ ವಿಚಾರ ಸೋನಿಯಾ ಗಾಂಧಿ ಅಂತಿಮ ತೀರ್ಮಾನದ ಮೇಲೆ ನಿರ್ಧರಿತವಾಗಿದೆ.
ಪಕ್ಷದ ಮೂಲಗಳ ಪ್ರಕಾರ ಏ.10ರಂದು ಕಾಂಗ್ರೆಸ್ ಎರಡನೇ ಪಟ್ಟಿ ಪ್ರಕಟವಾಗಲಿದೆ. ಪ್ರಮುಖ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಅಂದು ನಿರ್ಧಾರವಾಗಲಿದೆ. ಒಂದೇ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿರುವ ಅನೇಕರು ಎರಡನೇ ಪಟ್ಟಿ ಬಿಡುಗಡೆ ಆಗುವವರೆಗೆ ಕಾಯಲೇಬೇಕಾಗಿದೆ.
ಸಚಿವರ ಮಕ್ಕಳು : ಕೇಂದ್ರ ಸಚಿವರು ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸಲು ಶತ ಪ್ರಯತ್ನ ನಡೆಸಿದ್ದಾರೆ. ಚಿತ್ತಾಪುರದಿಂದ ಪ್ರಿಯಾಂಕ ಖರ್ಗೆ, ಕೆಜಿಎಫ್ ನಿಂದ ಕೆ.ಎಚ್.ಮುನಿಯಪ್ಪ ಪುತ್ರಿ ರೂಪಕಲಾ, ಜಯನಗರ ಕ್ಷೇತ್ರದಿಂದ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ರೆಹಮಾನ್ ಖಾನ್ ಪುತ್ರ ಮನ್ಸೂರ್ ಅಲಿಖಾನ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಹೆಬ್ಬಾಳ ಕ್ಷೇತ್ರದಿಂದ ಮಾಜಿ ಸಚಿವ ಜಾಫರ್ ಷರೀಫ್ ಅವರ ಮೊಮ್ಮಗ ರೆಹಮಾನ್ ಷರೀಫ್, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಮಾಜಿ ಸಂಸಸೆ ತೇಜಸ್ವಿನಿ ಶ್ರೀರಮೇಶ್, ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರದಿಂದ ಕೆಪಿಸಿಸಿ ಖಜಾಂಚಿ ಶಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡುವ ಕುರಿತು ಅಂತಿಮ ನಿರ್ಧಾರ ಎರಡನೇ ಪಟ್ಟಿಯಲ್ಲಿ ಹೊರಬೀಳಲಿದೆ.
ಆದ್ದರಿಂದ ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ. ಪ್ರಮುಖ ಕ್ಷೇತ್ರಗಳ ಅಭ್ಯರ್ಥಿಗಳು ಯಾರು? ಎಂಬುದು ಎರಡನೇ ಪಟ್ಟಿಯಲ್ಲಿ ತಿಳಿದು ಬರಲಿದೆ. ಏ.10ರಂದು ಪಟ್ಟಿ ಪ್ರಕವಾಗುವ ಸಂಭವಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications