ಬಿಜೆಪಿ ಆಹ್ವಾನ ಪತ್ರಿಕೆಯಲ್ಲಿ ಅಡ್ವಾಣಿ ಹೆಸರು ನಾಪತ್ತೆ

ಅರಮನೆ ಮೈದಾನದ ಕೃಷ್ಣ ವಿಹಾರ ಸಭಾಂಗಣದಲ್ಲಿ ನಡೆಯುವ ಸಮಾರಂಭವನ್ನು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಉದ್ಘಾಟಿಸಲಿದ್ದಾರೆ ಎಂದು ಪಕ್ಷದ ಮುಖಂಡರು ಹೇಳಿದ್ದರು. ಆದರೆ, ಪಕ್ಷದ ಆಹ್ವಾನ ಪತ್ರಿಕೆಯಲ್ಲಿ ಅಡ್ವಾಣಿ ಹೆಸರು ನಾಪತ್ತೆಯಾಗಿದೆ. ಆದ್ದರಿಂದ ಅಡ್ವಾಣಿ ಬರುತ್ತಾರೋ? ಇಲ್ಲವೋ ತಿಳಿಯದಾಗಿದೆ.
ಮಾಧ್ಯಮಗಳಿಗೆ ನೀಡಿದ ಜಾಹೀರಾತಿನಲ್ಲಿ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಬಿಜೆಪಿ ಸಮಾವೇಶ ಉದ್ಘಾಟಿಸಲಿದ್ದಾರೆ ಎಂದು ನಮೂದಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ರಾಜ್ಯ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಹಿರಿಯ ನಾಯಕ ಅರುಣ್ ಜೇಟ್ಲಿ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ.ಸದಾನಂದ ಗೌಡ ಮುಂತಾದವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಈ ಸಮಾವೇಶದ ಮೂಲಕ ಬಿಜೆಪಿ ತನ್ನ ಬಹಿರಂಗ ಚುನಾವಣಾ ಕಾರ್ಯ ಅರಂಭಿಸಲಿದೆ. ರಾಜ್ಯದ ಬಿಜೆಪಿ ನಾಯಕರಾದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿ ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಸಮಾವೇಶದಲ್ಲಿ ಪಾಲ್ಗೊಂಡು ಚುನಾವಣಾ ಪ್ರಚಾರ ಕಾರ್ಯವನ್ನು ಅಧಿಕೃತವಾಗಿ ಆರಂಭಿಸಲಿದ್ದಾರೆ.
ಏ.10ಕ್ಕೆ ಪ್ರಣಾಳಿಕೆ : ಏ.10ರಂದು 60 ಅಭ್ಯರ್ಥಿಗಳ ಪಟ್ಟಿ ಮತ್ತು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು ಕೆಜೆಪಿಗೆ ಬರದೇ ಇರುವ ಶಾಸಕರು ಚುನಾವಣೆ ಫಲಿತಾಂಶದ ನಂತರ ದುಖಃ ಪಡಲಿದ್ದಾರೆ ಎಂದು ಭವಿಷ್ಯ ನುಡಿದರು. ( ಕೆಜೆಪಿ ಅಭ್ಯರ್ಥಿಗಳಾರು)
ಮುನಿರತ್ನ ವಿರುದ್ಧ ಕೇಂದ್ರಕ್ಕೆ ಪತ್ರ : ಬಿಬಿಎಂಪಿ ಸದಸ್ಯ ಮತ್ತು ಚಿತ್ರ ನಿರ್ಮಾಪಕ ಮುನಿರತ್ನ ಅವರಿಗೆ ಟಿಕೆಟ್ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಕೆಪಿಸಿಸಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಮುನಿರತ್ನ ಅವರ ಕೈವಾಡವಿದೆ ಎಂದು ಪರಮೇಶ್ವರ್ ಆರೋಪಿಸಿದ್ದಾರೆ. (ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ)
ಅಶೋಕ್ ಗೆ ಮುತ್ತಿಗೆ : ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಎಂ.ಶ್ರೀನಿವಾಸ್ ಅವರಿಗೆ ಉಪ ಮುಖ್ಯಮಂತ್ರಿ ಆರ್.ಅಶೋಕ್ ಟಿಕೆಟ್ ಸಿಗದಂತೆ ಮಾಡಿದ್ದಾರೆ. ಆದ್ದರಿಂದ ಬಿಜೆಪಿ ಮೊದಲ ಪಟ್ಟಿಯಲ್ಲಿ ಅವರ ಹೆಸರು ಕೈ ಬಿಡಲಾಗಿದೆ ಎಂದು ಆರೋಪಿಸಿ ಶ್ರೀನಿವಾಸ್ ಅವರ ಬೆಂಬಲಿಗರು ಆರ್.ಅಶೋಕ್ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. (ಬಿಜೆಪಿ ಪಟ್ಟಿಯಲ್ಲಿ ಯಾರ ಹೆಸರಿದೆ )
ಜೆಡಿಎಸ್ ಸೇರ್ಪಡೆ : ಲಿಂಗಸಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಜೆಡಿಎಸ್ ಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಇಂದು ಪಕ್ಷದ ಕಚೇರಿಯಲ್ಲಿ ನಡೆಸ ಸಮಾರಂಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಜ್ಜಲ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. (ವಜ್ಜಲ್ ಗೆ ಟಿಕೆಟ್ ಕೊಡ್ತಾರಾ? )
ಬಿಜೆಪಿಗೆ ರಾಜೀನಾಮೆ : ಕಂಪ್ಲಿ ಶಾಸಕ ಸುರೇಶ್ ಬಾಬು ಮತ್ತು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಇಂದು ತಮ್ಮ ಬಿಜೆಪಿ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಪ್ರತಾಪ್ ಗೌಡ ಕಾಂಗ್ರೆಸ್ ಪಕ್ಷ ಸೇರಿದರೆ, ಸುರೇಶ್ ಬಾಬು ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಆನಂದ್ ಸಿಂಗ್ ಪಕ್ಷೇತರರಾಗಿ ಸ್ಪರ್ಧೆ : ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಬಿಜೆಪಿ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಹೊಸಪೇಟೆ ವಿಜಯ ನಗರ ಕ್ಷೇತ್ರದ ಶಾಸಕರಾದ ಆನಂದ್ ಸಿಂಗ್ ಕಾಂಗ್ರೆಸ್ ಸೇರುವ ವಿಫಲ ಯತ್ನ ನಡೆಸಿದ್ದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications