ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ತಯಾರು

ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತೀಕಟ್ಟಿ, ಕೇಂದ್ರದಿಂದ 40 ಮಂದಿ ಸ್ಟಾರ್ ಪ್ರಚಾರಕರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಯಾರು ಯಾವ ಕ್ಷೇತ್ರದಲ್ಲಿ ಪ್ರಚಾರ ನಡೆಸಬೇಕು ಎಂದು ಪ್ರಚಾರ ಸಮಿತಿ ರೂಪುರೇಷೆ ತಯಾರಿಸಲಿದೆ ಎಂದು ಹೇಳಿದರು.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಪ್ರಚಾರ ಸಮಿತಿ ಸಭೆ ನಡೆಯಲಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮನಹೋಹನ್ ಸಿಂಗ್ ಮುಂತಾದ ಸ್ಟಾರ್ ಮೊದಲನೇ ಹಂತದ ಸ್ಟಾರ್ ಪ್ರಚಾರಕರು ಆಗಮಿಸುವ ಸ್ಥಳ, ದಿನಾಂಕ ಮುಂತಾದವುಗಳ ಮಾಹಿತಿ ಅಂತಿಮಗೊಳಿಸಲಾಗುವುದು ಎಂದರು.
ಎರಡನೇ ಹಂತದಲ್ಲಿ ಕೇಂದ್ರ ಸಚಿವರಾದ ಎ.ಕೆ.ಆಂಟನಿ, ಗುಲಾಂ ನಬಿ ಅಜಾದ್, ಚಿರಂಜೀವಿ, ಪುರಂದರೇಶ್ವರಿ ರಾಜ್ಯಕ್ಕೆ ಆಗಮಿಸಿ ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು. ಆಂಧ್ರ ಪ್ರದೇಶ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ, ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಸಹ ಪ್ರಚಾರಕರಾಗಿ ಆಗಮಿಸಲಿದ್ದಾರೆ ಎಂದರು.
ರಾಜ್ಯದ ಸ್ಟಾರ್ ಪ್ರಚಾರಕರು : ಮಾಜಿ ಸಚಿವ ಎಸ್.ಎಂ.ಕೃಷ್ಣ, ಸಚಿವರಾದ ಕೆ.ಎಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದು ವೀರಣ್ಣ ಮತ್ತೀಕಟ್ಟಿ ಹೇಳಿದರು.
ನಾಳಿನ ಸಭೆಯಲ್ಲಿ ಜಿಲ್ಲಾವಾರು ಪ್ರಚಾರದ ದಿನಾಂಕಗಳನ್ನು ಅಂತಿಮಗೊಳಿಸಿ ಜಿಲ್ಲಾಧ್ಯಕ್ಷರಿಗೆ ಕಳುಹಿಸಲಾಗುವುದು ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ ಅದನ್ನು ಉಪಯೋಗಿಸಿಕೊಂಡು, ಅಧಿಕಾರ ಪಡೆಯುವುದೇ ಕಾಂಗ್ರೆಸ್ ನ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು.
ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿರುವ ಕಾಂಗ್ರೆಸ್ ಪ್ರಚಾರ ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸುವ ಸಾಧ್ಯತೆ ಇದೆ. ಇಂದಿನಿಂದ ಜೆಡಿಎಸ್ ಬಹಿರಂಗ ಚುನಾವಣಾ ಕಾರ್ಯ ಆರಂಭಿಸಿದೆ. ವಿಜಯ ಸಂಕಲ್ಪ ಯಾತ್ರೆ ಹೆಸರಿನಲ್ಲಿ ಬಿಜೆಪಿ ಈಗಾಗಲೇ ಪ್ರತಿ ಜಿಲ್ಲೆಯಲ್ಲಿ ಸಮಾವೇಶ ಆಯೋಜಿಸುತ್ತಿದೆ.
ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡು ಬಿಡುಗಡೆಯಾದ ನಂತರ ಎಲ್ಲಾ ಪಕ್ಷಗಳು ಬಹಿರಂಗವಾಗಿ ಚುನಾವಣೆ ಅಖಾಡಕ್ಕೆ ಧುಮುಕಲಿದ್ದು, ನಂತರ ಆರೋಪ ಪ್ರತ್ಯಾರೋಪಗಳು ಆರಂಭವಾಗಲಿವೆ. ಮತದಾರರನ್ನು ಒಲಿಸಿಕೊಳ್ಳುವ ಕಸರತ್ತು ಪ್ರಚಾರ ಕಾರ್ಯದ ಮೂಲಕ ಆರಂಭವಾಗಲಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications