ಚುನಾವಣೆ : ಇಂದಿನಿಂದ ಜೆಡಿಎಸ್ ಪ್ರಚಾರ ಆರಂಭ

ಮಂಗಳವಾರ ಮಧ್ಯಾಹ್ನ ಮಳವಳ್ಳಿಯ ದೇವಾಲಯದಲ್ಲಿ ಎಚ್.ಡಿ.ಕುಮಾರಸ್ವಾಮಿ ದಂಪತಿ ವಿಶೇಷ ಪೂಜೆ ನೆರವೇರಿಸಲಿದ್ದಾರೆ. ನಂತರ ಮಳವಳ್ಳಿಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಬಹಿರಂಗ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಪ್ರಚಾರ ಕಾರ್ಯ ನಡೆಯಲಿದ್ದು, ಮೊದಲ ಹಂತದಲ್ಲಿ ಹಳೇ ಮೈಸೂರು ಭಾಗದಲ್ಲಿ ಪ್ರಚಾರ ಕಾರ್ಯ ನಡೆಸಲಾಗುತ್ತದೆ ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಪಕ್ಷದ ಅನೇಖ ಮುಖಂಡರು ಇಂದಿನ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಹಳೇ ಮೈಸೂರು ಪ್ರಾಂತ್ಯದ ಪ್ರಚಾರ ಕಾರ್ಯ ಮುಗಿದ ಬಳಿಕ ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ಪ್ರಚಾರ ಕಾರ್ಯ ಪ್ರಾರಂಭಿಸಲು ಪಕ್ಷದ ಪ್ರಚಾರ ಸಮಿತಿ ಯೋಜನೆ ರೂಪಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಟ್ಟಿ ಬಿಡುಗಡೆಗೊಂಡ ಬಳಿಕ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಏ.15ಕ್ಕೆ ನಾಮಪತ್ರ : ರಾಮನಗರದಿಂದ ಎಚ್.ಡಿ.ಕುಮಾರಸ್ವಾಮಿ ಮತ್ತು ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಲಿರುವ ಅನಿತಾ ಕುಮಾರಸ್ವಾಮಿ, ಏ.15ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಶಾಸಕರಾಗಿರುವ ಕುಮಾರಸ್ವಾಮಿ ಸ್ಪರ್ಧೆಗೆ ದೇವೇಗೌಡರು ಈಗಾಗಲೇ ಅಸ್ತು ಎಂದಿದ್ದಾರೆ.
ಹಾಲಿ ಮುಧುಗಿರಿ ಶಾಸಕಿಯಾಗಿರುವ ಅನಿತಾ ಕುಮಾರಸ್ವಾಮಿ, ಮುಂದಿನ ಚುನಾವಣೆಗೆ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ದೇವೇಗೌಡರ ಆದೇಶದಂತೆ ಚನ್ನಪಟ್ಟಣದಿಂದ ಸ್ಪರ್ಧಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ : ಪುತ್ತೂರಿನಲ್ಲಿ ಏ.1ರಂದು ಪುತ್ತೂರಿನಲ್ಲಿ ಜೆಡಿಎಸ್ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶಕ್ಕೆ ಆಗಮಿಸಿದ್ದ ಕಾರ್ಯಕರ್ತರಿಗೆ ಊಟಕ್ಕಾಗಿ ಅನ್ನ, ಸಾಂಬರ್ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಪಕ್ಷ ನೀತಿ ಸಂಹಿತೆ ಉಲ್ಲಂಘಿಸಿತ್ತು.
ಸ್ಥಳಕ್ಕೆ ಆಗಮಿಸಿದ ಸಹಾಯಕ ಚುನಾವಣಾಧಿಕಾರಿ ಜೆಡಿಎಸ್ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿಕೊಂಡು ಅನ್ನ, ಸಾಂಬರ್ ವಶಕ್ಕೆ ಪಡೆದು ಅನಾಥಾಶ್ರಮಗಳಿಗೆ ಹಂಚಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications