ರಾಮನಗರ ಬಿಟ್ಟು ಎಲ್ಲೂ ಹೋಗೊಲ್ಲ: ಎಚ್ಡಿಕೆ ಘೋಷಣೆ
ರಾಮನಗರ, ಮಾ. 29: ತಮಗೆ ರಾಜಕೀಯವಾಗಿ ಜನ್ಮ ನೀಡಿದ ರಾಮನಗರದ ಜನತೆಗೆ ದ್ರೋಹ ಬಗೆದು, ಬೇರೆಡೆ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ. ಕ್ಷೇತ್ರ ಬದಲಾವಣೆ ಊಹಾಪೋಹವಷ್ಟೇ. ರಾಮನಗರದಲ್ಲಿ ಏ. 15ರಂದು ನಾಮಪತ್ರ ಸಲ್ಲಿಸುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ.
ರಾಮನಗರ ನನ್ನ ತವರು- ಎಂದಿಗೂ ಇಲ್ಲಿ ಸೋಲಿಲ್ಲ :
ರಾಮನಗರ ಮತ್ತು ನನ್ನದು ತಾಯಿ-ಮಗನ ಬಾಂಧವ್ಯ. ತಾಯಿಯೇ ಮಗನಿಗೆ ವಿಷ ಉಣಿಸುವುದನ್ನು ಕನಸು ಮನಸ್ಸಿನಲ್ಲೂ ಎಣಿಸಲಾಗದು. ಅಂತೆಯೇ ಈ ಕ್ಷೇತ್ರದ ಮತದಾರರು ನನ್ನನ್ನು ಸೋಲಿಸಿ ರಾಜಕೀಯವಾಗಿ ಕೊಲ್ಲುವುದಿಲ್ಲ ಎಂದು ಕುಮಾರಸ್ವಾಮಿ ಭಾವುಕರಾಗಿ ನುಡಿದರು.

ಸ್ವಕ್ಷೇತ್ರ ರಾಮನಗರದ ಕಸಬಾ, ಹಾರೋಹಳ್ಳಿ, ಮರಳವಾಡಿ ಹೋಬಳಿಯಲ್ಲಿ ಗುರುವಾರ ಗ್ರಾಮ ಸಂದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಕೇತೋಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮನ್ನು ಈ ಕ್ಷೇತ್ರದಿಂದ ಆಚೆಗಟ್ಟುತ್ತೇವೆಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವವರಿಗೆ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ರಾಮನಗರದ ಜತೆ ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧವಿದೆ. ಇಲ್ಲಿನ ಜನರೇ ನೆಟ್ಟು ಪೋಷಿಸಿದ ಸಸಿ ಈಗ ಮರವಾಗಿದೆ. ಇಡೀ ರಾಜ್ಯದ ಕೃಷಿಕರು, ಬಡವರು, ದಲಿತರಿಗೆ ನೆರಳಾಗಿರುವ ಆ ಮರವನ್ನು ರಾಮನಗರದ ಜನತೆ ಕಡಿದು ಹಾಕುವಂತೆ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಡಿಕೆಶಿ ಚುನಾವಣಾ ಬಜೆಟ್ಟು 100 ಕೋಟಿ:
ಡಿಕೆ ಶಿವಕುಮಾರ್ ಅವರು ಕನಕಪುರದಲ್ಲಿ ಈಗಾಗಲೇ 17 ಕೋಟಿ ರೂ ಖರ್ಚು ಮಾಡಿದ್ದಾರೆ. ಅವರ ಚುನಾವಣಾ ಬಜೆಟ್ಟು 100 ಕೋಟಿ ಆಗಿದೆ. ಕಾಂಗ್ರೆಸಿಗರಿಗೆ ಆತ್ಮಸ್ಥೈರ್ಯ ಇದ್ದರೆ ಅವರೂ ಸಹಿತ ಪಕ್ಷದ ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡುತ್ತಿರುವುದು ಏಕೆ ಎಂದು ಕುಮಾರುಸ್ವಾಮಿ ಪ್ರಶ್ನಿಸಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications