ಕೆಜೆಪಿಗೆ ಹೋಗೋಲ್ಲ ಉಮೇಶ್ ಕತ್ತಿ ಘೋಷಣೆ

ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಮಾತನಾಡಿದ ಉಮೇಶ್ ವಿಶ್ವನಾಥ ಕತ್ತಿ, ಬಿಜೆಪಿಯಲ್ಲೇ ಇರುತ್ತೇನೆ ಮತ್ತು ಮುಂದಿನ ಚುನಾವಣೆಗೆ ಹುಕ್ಕೇರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಕತ್ತಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ನಂತರ ಮಾತನಾಡಿದ ಅವರು ಬಿಜೆಪಿ ತೊರೆಯುವುದಿಲ್ಲವೆಂದು ಹೇಳಿದ್ದಾರೆ. ಉಮೇಶ್ ಕತ್ತಿಯವರ ನಿರ್ಧಾರದಿಂದಾಗಿ ಕೆಜೆಪಿ ಸೇರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಒಂದು ಹೆಸರು ಕೈ ಬಿಟ್ಟಂತಾಗಿದೆ. ಬೆಳಗಾವಿಯ ಪ್ರಬಲ ಬಿಜೆಪಿ ನಾಯಕರಾದ ಉಮೇಶ್ ಕತ್ತಿ, ಸಂಸದ ಪ್ರಭಾಕರ ಕೋರೆ ಮುಂತಾದವರು ಕೆಜೆಪಿ ಸೇರುತ್ತಾರೆ ಎಂಬ ಮಾತುಗಳು ಹರಿದಾಡುತ್ತಿದ್ದವು.
ಇದರ ಮಧ್ಯೆಯೇ ಕತ್ತಿ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಎಂಬ ಸುದ್ದಿಯೂ ಇತ್ತು. ಕೊನೆಗೂ ಅಂತಿಮ ನಿರ್ಧಾರ ತೆಗೆದುಕೊಂಡಿರುವ ಉಮೇಶ್ ಕತ್ತಿ ಬಿಜೆಪಿ ಬಿಡದಿರಲು ನಿರ್ಧರಿಸಿದ್ದಾರೆ. ಬಿಜೆಪಿಯಲ್ಲೇ ಉಳಿಯುವ ಸಚಿವರ ವಿರುದ್ಧ ಸ್ಪರ್ಧಿಸುವ ಕೆಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ರಾಜ್ಯ ನಾಯಕರು ಪ್ರತ್ಯೇಕ ರಣ ತಂತ್ರ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಯಡಿಯೂರಪ್ಪ ಗರಂ : ಕೆಜೆಪಿ ಸೇರುತ್ತೇನೆ ಎಂದು ಹೇಳುತ್ತಿದ್ದ ಕತ್ತಿಯವರ ನಿರ್ಧಾರ ಕೇಳಿ ಯಡಿಯೂರಪ್ಪ ಗರಂ ಆಗಿದ್ದಾರೆ ಎಂದು ಕೆಜೆಪಿ ಮೂಲಗಳು ತಿಳಿಸಿವೆ. ಕೆಜೆಪಿ ಸೇರುವ ಅಭ್ಯರ್ಥಿಗಳಲ್ಲಿ ಕತ್ತಿ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಅವರು ಪಕ್ಷ ಸೇರದಿದ್ದರೆ ಪ್ರತ್ಯೇಕ ರಣತಂತ್ರ ರೂಪಿಸಿ ಅವರನ್ನು ಸೋಲಿಸುತ್ತೇವೆ ಎಂದು ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ್ ಕುಮಾರ್ ಈಗಾಗಲೇ ಘೋಷಿಸಿ ಸಮರಸಾರಿದ್ದಾರೆ.
ಸಚಿವರ ಕೈಯಲ್ಲಿ ಪಟ್ಟಿ : ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಪರದಾಡುತ್ತಿರುವ ಬಿಜೆಪಿ ಹೊಸ ತಂತ್ರ ರೂಪಿಸಿದೆ. ಸಚಿವರಾದ ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಬಸವರಾಜ್ ಬೊಮ್ಮಾಯಿ ಅವರಿಗೆ ಪಟ್ಟಿ ತಯಾರಿಸುವ ಹೊಣೆ ನೀಡಿದ್ದು, ಈ ನಾಯಕರ ಅಭಿಪ್ರಾಯ ಆಧರಿಸಿ ಏ.1 ಮತ್ತು 2 ರಂದು ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಪಟ್ಟಿ ಅಂತಿಮಗೊಳಿಸಲು ನಿರ್ಧರಿಸಲಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications