ಅಧಿವೇಶನ ನಂತರ ಉಮೇಶ್ ಕತ್ತಿ ಕೆಜೆಪಿಗೆ

13-15 ಶಾಸಕರನ್ನು ಒಟ್ಟು ಮಾಡಿ ಒಮ್ಮೆಗೆ ರಾಜೀನಾಮೆ ಕೊಡಿಸುವ ಬದಲು ಹಂತ ಹಂತವಾಗಿ ಬಿಜೆಪಿಯನ್ನು ಹೆದರಿಸುತ್ತಾ ಕಾರ್ಯ ಸಾಧಿಸಲು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಿಂತಿಸಿದ್ದಾರೆ. ಬಿಜೆಪಿಯಿಂದ ಇನ್ನಷ್ಟು ಸಚಿವರು, ಶಾಸಕರು ಕೆಜೆಪಿ ಸೇರುವ ಬಗ್ಗೆ ಸ್ವತಃ ಯಡಿಯೂರಪ್ಪ ಅವರೇ ಸುಳಿವು ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು, ಸಚಿವ ಉಮೇಶ್ ಕತ್ತಿ ಅವರು ನಿರಂತರವಾಗಿ ಕೆಜೆಪಿ ಸಂಪರ್ಕದಲ್ಲಿದ್ದಾರೆ. ಸದ್ಯದಲ್ಲೇ ಕೆಜೆಪಿ ಸೇರಲಿದ್ದಾರೆ ಎಂದರು.
ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನದಲ್ಲಿ ಉಮೇಶ್ ಕತ್ತಿ ಅವರು ಕೃಷಿ ಬಜೆಟ್ ಮಂಡಿಸಲಿದ್ದಾರೆ. ಅಧಿವೇಶನದ ನಂತರ ಉಮೇಶ್ ಕತ್ತಿ ಅವರ ಜೊತೆಯಲ್ಲಿ ಬೆಳಗಾವಿಯ ಇನ್ನಷ್ಟು ಶಾಸಕರು, ಕಾರ್ಯಕರ್ತರು ಕೆಜೆಪಿ ಸೇರಲಿದ್ದಾರೆ. ಈ ಭಾಗದಲ್ಲಿ ಉಮೇಶ್ ಕತ್ತಿ ಅವರು ಕೆಜೆಪಿಯನ್ನು ಸಂಘಟಿಸುವ ಜವಾಬ್ದಾರಿ ಹೊರಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
2020ರ ಹೊತ್ತಿಗೆ ಭಾರತದಲ್ಲಿ ರಾಜ್ಯಗಳ ಸಂಖ್ಯೆ 50ಕ್ಕೇರಲಿದೆ. ಆ ಹೊತ್ತಿಗೆ ಉತ್ತರ ಕರ್ನಾಟಕ ಕೂಡ ಪ್ರತ್ಯೇಕ ರಾಜ್ಯವಾಗುವುದು ಖಂಡಿತ. ಆ ಸಮಯದಲ್ಲಿ ನಾನು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೋ ಇಲ್ಲವೋ. ಕನಿಷ್ಠಪಕ್ಷ ನನ್ನ ಮಗನಾದರೂ ಮುಖ್ಯಮಂತ್ರಿಯಾಗಲಿ." ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಉಮೇಶ್ ಕತ್ತಿ ಅವರು ಯಡಿಯೂರಪ್ಪ ಅವರ ಪರ ಎಂಬುದರಲ್ಲಿ ಸಂಶಯವಿಲ್ಲ.
ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೇ ಯಡಿಯೂರಪ್ಪ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು. ಮುಂದಿನ ಚುನಾವಣೆ ನಮ್ಮ ನಾಯಕರಾದ ಯಡಿಯೂರಪ್ಪ ಅವರ ನಾಯಕತ್ವದಲ್ಲಿಯೇ ನಡೆಯಲಿದೆ. ಬಿಜೆಪಿ ಅಧಿಕಾರಕ್ಕೆ ತರಲು ಯಡಿಯೂರಪ್ಪ ಅವರೊಬ್ಬರಿಂದ ಮಾತ್ರ ಸಾಧ್ಯ ಎಂದು ಸಚಿವ ಕತ್ತಿ ಹೇಳಿದ್ದರು.












Click it and Unblock the Notifications