ಪುಢಾರಿ ಮಕ್ಕಳ ಹಲ್ಲೆ, ಇನ್ಸ್ ಪೆಕ್ಟರ್ ಸ್ಥಿತಿ ಗಂಭೀರ
ಮುಂಬೈ, ಮಾ.28: ಇಲ್ಲಿನ ಧುಲೆಯಲ್ಲಿ ಮಾಜಿ ಕಾರ್ಪೊರೇಟರ್ ಅವರ ಇಬ್ಬರು ಮಕ್ಕಳು ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಗೆ ತಲವಾರಿನಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಮಹಾರಾಷ್ಟ್ರದ ಶಾಸಕರು ಪೊಲೀಸ್ ಅಧಿಕಾರಿಯೊಬ್ಬರಿಗೆ ಸದನದಲ್ಲೇ ಹಲ್ಲೆ ಮಾಡಿದ ಕೆಲವೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ.
ಮಂಗಳವಾರ ರಾತ್ರಿ ಹೋಳಿ ಸಂಭ್ರಮಾಚರಣೆ ವೇಳೆ ಎರಡು ತಂಡಗಳ ನಡುವೆ ಮಾರಾಮಾರಿಯಾಗುತ್ತಿರುವ ಸುದ್ದಿ ಬಂದಿದೆ. ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಧನಂಜಯ್ ಪಾಟೀಲ್ ಅವರು ಸ್ಥಳಕ್ಕೆ ತೆರಳಿದ್ದಾರೆ. ಆದರೆ, ಹೋಳಿ ಗಲಾಟೆಯಲ್ಲಿ ತೊಡಗಿದ್ದ ಎನ್ ಸಿಪಿ ಕಾರ್ಪೊರೇಟರ್ ಮಕ್ಕಳನ್ನು ಪಾಟೀಲ್ ತಡೆಯಲು ಯತ್ನಿಸಿದ್ದಾರೆ. ಅದರೆ, ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗಿಲ್ಲ.
ಈ ವೇಳೆ ಎನ್ ಸಿಪಿಯ ಮಾಜಿ ಕಾರ್ಪೊರೇಟರ್ ಚಂದ್ರಕಾಂತ್ ಸೊನಾರೆ ಅವರ ಮಕ್ಕಳಾದ ದೇವೇಂದ್ರ ಮತ್ತು ಭೂಷಣ್ ತಲವಾರಿನಿಂದ ಪಾಟೀಲ್ ಬೆನ್ನಿಗೆ ದಾಳಿ ಮಾಡಿದ್ದಾರೆ ಎಂದು ಧುಲೆಯ ಅಜಾದ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಹೇಳಿದ್ದಾರೆ. ಚಂದ್ರಕಾಂತ್ ಮಕ್ಕಳ ಜೊತೆ 25 ಜನರ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಪಾಟೀಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಟೀಲ್ ತುರ್ತು ನಿಗಾ ವಿಭಾಗದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಪೊಲೀಸರು ಇಬ್ಬರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೋದರರಿಬ್ಬರು ಪರಾರಿಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಹತ್ತು ದಿನಗಳ ಅಂತರದಲ್ಲಿ ರಾಜಕೀಯ ಸಂಬಂಧಿಸಿದ ವ್ಯಕ್ತಿಗಳಿಂದ ಪೊಲೀಸರ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ. ಮುಂಬೈ ಪೊಲೀಸ್ ಸಚಿನ್ ಸೂರ್ಯವಂಶಿ ಮೇಲೆ ಮಾ. 19ರಂದು ವಿಧಾನ ಭವನದಲ್ಲಿ ಶಾಸಕರು ಹಲ್ಲೆ ಮಾಡಿದ್ದರು. ಐದು ಮಂದಿ ಶಾಸಕರನ್ನು ಅಮಾನತುಗೊಳಿಸಲಾಗಿತ್ತು. ಇದರಲ್ಲಿ ಇಬ್ಬರು ಕೋರ್ಟಿಗೆ ಶರಣಾಗಿದ್ದರು. ಸೋಮವಾರ ಅವರಿಗೆ ಜಾಮೀನು ಸಿಕ್ಕಿತ್ತು.












Click it and Unblock the Notifications