ಸೋಮಣ್ಣಗೆ ಕ್ಯಾರೆಟ್ ಹಾಕಿದ ಯಡಿಯೂರಪ್ಪ

ಆದರೆ ಯಡಿಯೂರಪ್ಪ, ಶೋಭಾ ಫಿಯರ್ ಫ್ಯಾಕ್ಟರ್ ಗಿಂತ ಹೆಚ್ಚಾಗಿ ಹಿಂಜರಿಯುತ್ತಿರುವ ನಾಯಕರ ಒಳಸಂಕಟಗಳನ್ನು ಅರಿತಿದ್ದಾರೆ. ಅಡಕತ್ತರಿಗೆ ಸಿಕ್ಕಿರುವ ಇಂತಹ ನಾಯಕರು ತಮ್ಮೊಂದಿಗೆ ಹೆಜ್ಜೆ ಹಾಕುವುದು ಗ್ಯಾರಂಟಿ ಎಂಬುದು ಯಡಿಯೂರಪ್ಪ ಕಂಡುಕೊಂಡಿರುವ ಸತ್ಯ.
ಹಾಗೆಂದೇ... ಪ್ರಸ್ತುತ ಇನ್ನೂ ಬಿಜೆಪಿಯಲ್ಲಿರುವ ಸಚಿವ ವಿ ಸೋಮಣ್ಣ ಅವರಿಗೆ ಕೆಜೆಪಿ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ ಕ್ಯಾರೆಟ್ ಹಾಕಿದ್ದಾರೆ. 'ಸೋಮಣ್ಣ ಕೆಜೆಪಿಗೆ ಬಂದರೆ ಖಂಡಿತಾ ಟಿಕೆಟ್ ಕೊಡ್ತೀನಿ' ಎಂಬ ಭರವಸೆಯ ಮಾತುಗಳನ್ನಾಡಿದ್ದಾರೆ.
ಆದರೆ, ಒಂದು ವೇಳೆ ಯಾವುದೇ ಪಕ್ಷವೂ ದೊಡ್ಡ ಮನಸು ಮಾಡಿ ಟಿಕೆಟ್ ನೀಡಿದರೂ ವಿಚಿತ್ರ ಪರಿಸ್ಥಿತಿಗೆ ಸಿಲುಕಿರುವ ಸೋಮಣ್ಣಗೆ ಕ್ಷೇತ್ರದ್ದೇ ಸಮಸ್ಯೆಯಾಗಿದೆ. ಏಕೆಂದರೆ BTH ಸೆಂಟರುಗಳ ಪೈಕಿ ಬೆಂಗಳೂರು ಹೌಸ್ ಫುಲ್ ಆಗಿದೆ. ಹಾಸನ ಮತ್ತು ತುಮಕೂರು ಸೋಮಣ್ಣಗೆ ಸರಿಹೊಂದುವುದಿಲ್ಲ. ಹಾಗಾದರೆ ಯಾವ ಮರದ ನೆರಳಲ್ಲಿ ನಿಲ್ಲೋದು? ಎಂಬುದೇ ಸೋಮಣ್ಣರ ಸಣ್ಣ ಸಮಸ್ಯೆ.
ಸೋಮಣ್ಣರ ಕ್ಷೇತ್ರ ಸಮಸ್ಯೆಯನ್ನು ಅರಿತಿರುವ ಯಡಿಯೂರಪ್ಪನವರು 'ಆ ಸಮಸ್ಯೆಯನ್ನೂ ಬಗೆಹರಿಸುತ್ತೇನೆ. ನಾನು ದೊಡ್ಡಾಲದ ಮರ. ನಿನಗೆ ಆಶ್ರಯ ಕೊಡುತ್ತೇನೆ. ನಿನಗೆ ಸರಿಹೊಂದುವ ಕ್ಷೇತ್ರ ಕೊಡ್ತೇನೆ ಬಾ' ಎಂದೂ ಸಂದೇಶ ರವಾನಿಸಿದ್ದಾರೆ.
ಏ. 1 ಅಥವಾ 2ರಂದು ಕೆಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ. ಆ ವೇಳೆಗೆ ಸೋಮಣ್ಣ ಕೆಜೆಪಿ ಸೇರ್ಪಡೆ ನಿಕ್ಕಿಯಾದರೆ ಚಾಮರಾಜನಗರದ ಯಾವುದಾದರೊಂದು (ಹನೂರು?) ಕ್ಷೇತ್ರದಿಂದ ಕಣಕ್ಕಿಳಿಸುವ ಮಾತನ್ನಾಡಿದ್ದಾರೆ ಯಡಿಯೂರಪ್ಪ.
ಕೆಜೆಪಿ ಅಭ್ಯರ್ಥಿಗಳಿಗೆ ತರಬೇತಿ ಕಾರ್ಯಾಗಾರ: ಈ ಮಧ್ಯೆ, ಈಗಾಗಲೇ ಮೊದಲ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ 69 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳಿಗಾಗಿ ಕೆಜೆಪಿ ಚುನಾವಣೆ ಸಂಬಂಧ ತರಬೇತಿ ಕಾರ್ಯಾಗಾರವನ್ನು ಬೆಂಗಳೂರಿನಲ್ಲಿ ಸೋಮವಾರ ನಡೆಸಿದೆ.
ಈ ಕಾರ್ಯಾಗಾರದಲ್ಲಿ ಅಭ್ಯರ್ಥಿಗಳೂ ಸೇರಿದಂತೆ ಪಕ್ಷದ ರಾಜ್ಯ ಪದಾಧಿಕಾರಿಗಳೂ ಪಾಲ್ಗೊಳ್ಳಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳು, ಅನುಸರಿಸಬೇಕಾದ ತಂತ್ರೋಪಾಯಗಳು, ಪ್ರಚಾರದ ಸ್ವರೂಪ ಮತ್ತಿತರ ವಿಷಯಗಳ ಬಗ್ಗೆ ಅಭ್ಯರ್ಥಿಗಳಿಗೆ ಮಾರ್ಗಗದರ್ಶನ ನೀಡಲಾಗುತ್ತದೆ ಎಂದು ಕೆಜೆಪಿ ಮೂಲಗಳು ತಿಳಿಸಿವೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications