ಹುಬ್ಬಳ್ಳಿ-ಧಾರವಾಡದಲ್ಲಿ ಶೆಟ್ಟರ್-ಜೋಷಿ ಗತಿಯೇನು?
ಧಾರವಾಡ, ಮಾರ್ಚ್ 22: ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿಗೆ ಗೆಲ್ಲಬಲ್ಲ ಅಭ್ಯರ್ಥಿಗಳೇ ಇಲ್ಲ. ಇದನ್ನು ಅರಗಿಸಿಕೊಳ್ಳುವುದಕ್ಕೆ ಆಡಳಿತಾರೂಢ ಬಿಜೆಪಿ ಪಕ್ಷದ ನೂತನ ಸಾರಥಿ ಪ್ರಹ್ಲಾದ ವೆಂಕಟೇಶ್ ಜೋಷಿ ಮತ್ತು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ತುಂಬಾ ಕಷ್ಟವೇ ಆಗಬಹುದು. ಆದರೆ ಅದು ಕಟುವಾಸ್ತವ ಎನಿಸಿದೆ.
ಹೇಳಿ ಕೇಳಿ ಹುಬ್ಬಳ್ಳಿ-ಧಾರವಾಡ ಈ ಇಬ್ಬರೂ ನಾಯಕರ ತವರು ಜಿಲ್ಲೆಗಳು. ಇಲ್ಲೇ ಇಬ್ಬರಿಗೂ ಇಂತಹ ಪಡಿಪಾಟಲು ಆದರೆ ಬೇರೆಡೆ ಗತಿಯೇನು ಎಂಬ ಚಿಂತೆ ಪಕ್ಷವನ್ನು ವ್ಯಾಪಕವಾಗಿ ಕಾಡಲಾರಂಭಿಸಿದೆ. ಇತ್ತೀಚಿನ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಸೋತಿರುವುದು ಈ ಇಬ್ಬರೂ ನಾಯಕರಿಗೆ ಮತ್ತಷ್ಟು ಇರುಸುಮರುಸು ತಂದಿದೆ.
ಆದರೆ ವಿಷಯ ಅದಲ್ಲ. ಏನಪಾ ಅಂದರೆ ಬಿಜೆಪಿಯನ್ನು ಸಂಹರಿಸುತ್ತೇನೆ ಎಂದು ವೀರಾವೇಶದಿಂದ ಮಾತನಾಡಿರುವ ಪಕ್ಷದ ಮಾಜಿ ನಾಯಕ/ ಹಾಲಿ ಕೆಜೆಪಿಯ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಬಿಜೆಪಿಗೆ ಇಲ್ಲಿ ಚುನಾವಣೆಗೂ ಮುನ್ನವೇ ಮಳುಗುನೀರು ತಂದಿತ್ತಿದ್ದಾರೆ.

ಗೆಲ್ಲಬಲ್ಲ ಅಭ್ಯರ್ಥಿಗಳೇ ಇಲ್ಲ: ಇದ್ದಿದ್ದೊಂದು ಇಲಿ ಕಚ್ಚಿಕೊಂಡು ಹೋಯ್ತು ಅಂತ ಪಕ್ಷದಲ್ಲಿ ಸಚಿವರಾದಿಯಾಗಿ ವಿಜೃಂಭಿಸುತ್ತಿದ್ದ ಶಾಸಕ ಮಹಾಶಯರು ದೀಢಿರನೆ ಕೆಜೆಪಿಯತ್ತ ಗುಳೇ ಹೊರಟಿದ್ದಾರೆ. ಉಳಿದ ಒಂದಿಬ್ಬರನ್ನೂ ಶತಾಯಗತಾಯ ತನ್ನ ತೆಕ್ಕೆಗೆ ಎಳೆದುಕೊಳ್ಳಲು ಯಡಿಯೂರಪ್ಪ ತಮ್ಮ ಪ್ರಯತ್ನವನ್ನು ಜಾರಿಯಲ್ಲಿಟ್ಟಿದ್ದಾರೆ. ಇದರಿಂದ ಬಿಜೆಪಿ ಸರಕಾರ ಮತ್ತು ಪಕ್ಷದ ಚುಕ್ಕಾಣಿ ಹಿಡಿದ ನಾಯಕ ಜೋಡಿ ಕಂಗಾಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು 7 ಕ್ಷೇತ್ರಗಳಿವೆ. ಹಾಲಿ ವಿಧಾನಸಭೆಗೆ ಈ ಜಿಲ್ಲೆಯು ಬಿಜೆಪಿಯಿಂದ 6 ಮಂದಿ ಶಾಸಕರನ್ನು ಕಳಿಸಿಕೊಟ್ಟಿದೆ. ಉಳಿದೊಬ್ಬರು ಕಾಂಗ್ರೆಸ್ಸಿನವರು. ಹಿನ್ನೆಲೆ ಹೀಗಿರುವಾಗ ಈ ಬಾರಿ ಗೆಲ್ಲಬಲ್ಲ ಅಭ್ಯರ್ಥಿಗಳಿಗಾಗಿ ಪರದಾಡುತ್ತಿರುವುದು ಪಕ್ಷ ಅಧೋಗತಿ ತಲುಪಿರುವುದಕ್ಕೆ ಸಾಕ್ಷಿಯಾಗಿದೆ.
ಹಾಲಿ ಶಾಸಕರ ಪಟ್ಟಿ ಹೀಗಿದೆ:
1. ನವಲಗುಂದ (ಶಂಕರ ಪಾಟೀಲ್ ಮುನೇನಕೊಪ್ಪ-ಬಿಜೆಪಿ)
2. ಕುಂದಗೋಳ (ಸಿದ್ದನಗೌಡ ಈಶ್ವರಗೌಡ ಚಿಕ್ಕನಗೌಡ್ರ -ಬಿಜೆಪಿ)
3. ಧಾರವಾಡ (ಸೀಮಾ ಅಶೋಕ್ ಮಸೂತಿ -ಬಿಜೆಪಿ)
4. ಹುಬ್ಬಳ್ಳಿ ಧಾರವಾಡ ಪೂರ್ವ- ಮೀಸಲು (ವೀರಭದ್ರಪ್ಪ ಹಾಲಹರವಿ- ಬಿಜೆಪಿ)
5. ಹುಬ್ಬಳ್ಳಿ-ಧಾರವಾಡ ಕೇಂದ್ರ (ಜಗದೀಶ್ ಶೆಟ್ಟರ್ -ಬಿಜೆಪಿ)
6. ಹುಬ್ಬಳ್ಳಿ-ಧಾರವಾಡ ಪಶ್ಚಿಮ (ಚಂದ್ರಕಾಂತ ಬೆಲ್ಲದ -ಬಿಜೆಪಿ)
7. ಕಲಘಟಗಿ (ಸಂತೋಷ್ ಲಾಡ್- ಕಾಂಗ್ರೆಸ್)
ಹಾಲಿ ಶಾಸಕರಾದ ಸಿದ್ದನಗೌಡ ಈಶ್ವರಗೌಡ ಚಿಕ್ಕನಗೌಡ್ರ, ಚಂದ್ರಕಾಂತ ಬೆಲ್ಲದ ಮತ್ತು ಪಕ್ಷದ ಹಿರಿಯ ನಾಯಕರಾದ ಸಿಎಂ ಲಿಂಬಣ್ಣವರ್ ಅವರು ಕೆಜೆಪಿಯತ್ತ ವಾಲಿದ್ದಾರೆ. ಪಕ್ಕದ ಹಾವೇರಿ ಜಿಲ್ಲೆಯಲ್ಲೂ ಬಿಜೆಪಿ ಸ್ಥಿತಿ ಇದೇ ಆಗಿದೆ. ಹಾವೇರಿಯ ಉದಾಸಿ ಕುಟುಂಬ, ನೆಹರೂ ಓಲೇಕಾರ, ಸುರೇಶ್ ಗೌಡ ಪಾಟೀಲ್ ಕೆಜೆಪಿಯನ್ನು ಅಪ್ಪಿಕೊಂಡಾಗಿದೆ.
ಹಾಗಾಗಿ ಜಗದೀಶ್ ಶೆಟ್ಟರ್, ಸೀಮಾ ಅಶೋಕ್ ಮಸೂತಿ ಮತ್ತು ಶಂಕರ ಪಾಟೀಲ್ ಮುನೇನಕೊಪ್ಪ ಅವರನ್ನು ಹೊರತುಪಡಿಸಿದರೆ ಇಲ್ಲಿ ಕೆಜೆಪಿ ಮತ್ತು ಕಾಂಗ್ರೆಸ್ಸಿಗೆ ಸಡ್ಡು ಹೊಡೆದು ತಮ್ಮ ಪಕ್ಷಕ್ಕೆ ಜಯ ತಂದುಕೊಡಬಲ್ಲ ಕಲಿಗಳು ಬಿಜೆಪಿಗೆ ಇಲ್ಲವಾಗಿದ್ದಾರೆ.
ಮರೆತ ಮತು: ಈ ಭಾರಿ ಕೆಲ ಸಂಸದರು ವಿಧಾನಸಭೆಗೆ ಸ್ಪರ್ಧಿಸುವ ಮೂಲಕ ತಮ್ಮ ಪಕ್ಷಕ್ಕೆ ಒಂದೆರಡು ಶಾಸಕರನ್ನಾದರೂ ಕೊಡುಗೆಯಾಗಿ ನೀಡಲು ಮುಂದಾಗಿದ್ದಾರೆ. ಹಾಗಾದಲ್ಲಿ ಸಂಸದ ಪ್ರಹ್ಲಾದ ಜೋಶಿ ಅವರೂ ಸಹ ಅವಿಭಜಿತ ಜಿಲ್ಲೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳುವ ಮೂಲಕ ಪಕ್ಷಕ್ಕೆ ಅಗತ್ಯ ಇಂಧನ ತುಂಬಬಹುದು. All the best Jagadish Shettar & Prahlad Joshi!
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications