ಚುನಾವಣೆ ತಯಾರಿ ಸಭೆಗಳಲ್ಲಿ ಪಕ್ಷಗಳು ಬ್ಯುಸಿ

ಸ್ಥಳೀಯ ಸಂಸ್ಥಗಳ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆದು ಉತ್ಸಾಹದಲ್ಲಿರುವ ಕಾಂಗ್ರೆಸ್, ಶನಿವಾರ ದೇವನಹಳ್ಳಿಯ ರೆಸಾರ್ಟ್ ವೊಂದರಲ್ಲಿ ರಾಜ್ಯ ಚುನಾವಣಾ ಸಮಿತಿಯನ್ನು ಆಯೋಜಿಸಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಸಭೆಯಲ್ಲಿ ಹೈಕಮಾಂಡ್ ನಾಯಕರು, ರಾಜ್ಯ ಕಾಂಗ್ರೆಸ್ ನ ಪ್ರಮುಖ ನಾಯಕರು ಸೇರಿದಂತೆ 51 ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೆಪಿಸಿಸಿಯ ಜಿಲ್ಲಾ ಘಟಕಗಳು ಕಳುಹಿಸಿರುವ ಅಭ್ಯರ್ಥಿಗಳ ಪಟ್ಟಿಯನ್ನು ಈ ಸಭೆಯಲ್ಲಿ ಅಂತಿಮಗೊಳಿಸಲಾಗುತ್ತದೆ. ಅನ್ಯ ಪಕ್ಷೀಯರ ಸೇರ್ಪಡೆ, ಜಾತಿ ಸಮೀಕರಣ, ಚುನಾವಣಾ ಪ್ರಣಾಳಿಕೆ ರಚನೆ, ಚುನಾವಣಾ ಪ್ರಚಾರ ತಂತ್ರ ಮುಂತಾದ ವಿಚಾರಗಳ ಕುರಿತು ವಿವರವಾದ ಚರ್ಚೆ ನಡೆಯಲಿದೆ.
ಸಭೆಯಲ್ಲಿ ಅಂತಿಮಗೊಳಿಸಿದ ಅಭ್ಯರ್ಥಿಗಳ ಪಟ್ಟಿ ಹಿಡಿದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮತ್ತು ವಿಪಕ್ಷ ನಾಯಕ ಸಿದ್ಧರಾಮಯ್ಯ ಮಾ.21ರಂದು ನವದೆಹಲಿಗೆ ತೆರಳಿದ್ದು ಹೈ ಕಮಾಂಡ್ ನಾಯಕರಿಗೆ ಪಟ್ಟಿ ನೀಡಲಿದ್ದಾರೆ. ಅನ್ಯ ಪಕ್ಷೀಯರ ಸೇರ್ಪಡೆ ಬಗ್ಗೆಯೂ ಮಾ.21ರಂದು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಜಿಲ್ಲಾವಾರು ಸಭೆಯಲ್ಲಿ ಬಿಜೆಪಿ ಬ್ಯುಸಿ : ಗುರುವಾರದಿಂದಲೇ ಬಿಜೆಪಿ ಜಿಲ್ಲಾವಾರು ಸಭೆಗಳನ್ನು ಪ್ರಾರಂಭಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸೋಲಿನ ಅವಲೋಕನ ಮತ್ತು ವಿಧಾನಸಭೆ ಚುನಾವಣೆ ತಯಾರಿ ಕುರಿತು ಬಿಜೆಪಿ ಸಭೆ ನಡೆಯುತ್ತಿದೆ. ಗುರುವಾರ ಹಾಸನ, ಮಂಡ್ಯ, ಕೋಲಾರ, ಚಾಮರಾಝನಗರ ಜಿಲ್ಲಾ ಅಧ್ಯಕ್ಷರ ಸಭೆ ನಡೆಸಲಾಗಿದೆ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮುಂತಾದ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ವಿಧಾನಸಭೆ ಚುನಾವಣೆಗೆ ಪ್ರತಿ ಜಿಲ್ಲಾಧ್ಯಕ್ಷರು ಅವರ ಜಿಲ್ಲೆಗಳ ಪ್ರತಿ ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳ ಹೆಸರುಗಳನ್ನು ಸೂಚಿಸುವಂತೆ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ.
ಜೆಡಿಎಸ್ ಸಭೆ : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭವ ಜೊತೆಗೆ ವಿಧಾನಸಭೆ ಚುನಾವಣೆ ಕಾರ್ಯತಂತ್ರ ರೂಪಿಸಲು ಮಾ.18ರಂದು ಜೆಡಿಎಸ್ ಸಭೆ ನಡೆಯಲಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸುವ ಸಂಭವವಿದೆ.
ನೂತನವಾಗಿ ಸ್ಥಾಪಿತವಾಗಿರುವ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಗುರುವಾರ ನಗರದ ಅರಮೆನ ಮೈದಾನದಲ್ಲಿ ಒಂದು ಹಂತದ ಸಭೆ ಮುಗಿಸಿದೆ. ಮಾ.19ರಿಂದ 23ರ ವರೆಗೆ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಶ್ರೀರಾಮುಲು ನೇತೃತ್ವ ಬಿಎಸ್ಆರ್ ಕಾಂಗ್ರೆಸ್ ಬಳ್ಳಾರಿಯಲ್ಲಿ ಚುಣಾವಣಾ ಸಿದ್ಧತೆ ಸಭೆ ಪ್ರಾರಂಭಿಸಿದೆ. 80 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಮುಂದುವರೆದಿದ್ದು ಜನರು ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಆಡಳಿತ ನಡೆಸಬೇಕಾದ ನಾಯಕರು ಬೆಂಗಳೂರಿನಲ್ಲಿ ಸರಣಿ ಸಭೆಗಳಲ್ಲಿ ತೊಡಗಿದ್ದಾರೆ. ಇದರಿಂದಾಗಿ ಸಂಕಷ್ಟ ಎದುರಾಗಿರುವುದು ಜನತೆಗೆ, ವಿಧಾನಸಭೆ ಚುಣಾವಣೆ ಗೆಲುವು ಒಂದೆಡೆ ಇರಲಿ ಜನರ ಸಂಕಷ್ಟ ಕೇಳುವವರಾರು?
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications