ಶುಕ್ರವಾರ ಇಂಧನ ಬೆಲೆ ಸಿಹಿ ಕಹಿ ಸುದ್ದಿ ನಿರೀಕ್ಷೆ

ಇನ್ನೆರಡು-ಮೂರು ದಿನಗಳಲ್ಲಿ ಡೀಸೆಲ್ ದರ ಏರಿಕೆಯಾಗಲಿದ್ದರೆ, ಪೆಟ್ರೋಲ್ ದರ ಕಡಿತದ ಬಗ್ಗೆ ಸಂಜೆ ವೇಳೆಗೆ ಆದೇಶ ಹೊರಬೀಳುವ ಮುನ್ಸೂಚನೆ ಸಿಕ್ಕಿದೆ ಎಂದು ಪಿಟಿಐ ವರದಿ ಮಾಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳ ದರ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಬೆಲೆಯನ್ನು 1 ಅಥವಾ 1.40ರೂ.ನಷ್ಟು ಇಳಿಸುವ ಕುರಿತಂತೆ ಕೇಂದ್ರ ಸರ್ಕಾರ ತೈಲ ಕಂಪೆನಿಗಳೊಂದಿಗೆ ಚರ್ಚೆ ನಡೆಸಿದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 70.74 ರೂ.ನಷ್ಟಿದ್ದು, ಅದು 69.74ರೂ.ಗಳಿಗೆ ಕುಸಿಯುವ ಸಾಧ್ಯತೆಗಳಿವೆ. ಜನವರಿ ಮೊದಲ ವಾರದಿಂದಲೇ ಡೀಸೆಲ್ ದರ 15 ದಿನಗಳಿಗೊಮ್ಮೆ ಹೆಚ್ಚಳವಾಗುತ್ತಲೇ ಬಂದಿದೆ.
ತೈಲ ಕಂಪೆನಿಗಳು ಲೀಟರ್‌ಗೆ 11.26 ರೂ.ಗಳಷ್ಟು ಹೊರೆ ಉಂಟಾಗುತ್ತಿದೆ. ಮತ್ತೊಮ್ಮೆ ದರ ಏರಿಕೆಗೆ ಅವಕಾಶ ನೀಡಬೇಕೆಂದು ಕೇಂದ್ರಕ್ಕೆ ಮೊರೆ ಹೋಗಿದ್ದು, ಬಹುತೇಕ ಎರಡು-ಮೂರು ದಿನಗಳಲ್ಲಿ ಲೀಟರ್ ಡೀಸೆಲ್ ಮೇಲಿನ ದರ 50 ರಿಂದ 60 ಪೈಸೆಯಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ.
ಮಾ.2 ರಂದು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಸೇನೆ, ರೈಲ್ವೆಯಂತಹ ಸಗಟು ಖರೀದಿದಾರರಿಗೆ ಡೀಸೆಲ್ ದರದಲ್ಲಿ ಲೀಟರ್‌ಗೆ ಸುಮಾರು 1 ರೂ.ನಷ್ಟು ಏರಿಕೆ ಮಾಡಿವೆ. ಸಬ್ಸಿಡಿಯೇತರ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಇಳಿಕೆಯಾಗಿದೆ. ಆದರೆ, ಪೆಟ್ರೋಲ್ ಬಂಕ್ ಗಳಲ್ಲಿ ಸಿಗೋ ಡೀಸೆಲ್ ಹಾಗೂ ಸಬ್ಸಿಡಿ ದರದಲ್ಲಿ ಸಿಗುವ ಸಿಲಿಂದರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.
ಇದಕ್ಕೂ ಮುನ್ನ ಬಜೆಟ್ ನಂತರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಸಾವಿರಾರು ಕೋಟಿ ನಷ್ಟವಾಗುವುದನ್ನು ತಗ್ಗಿಸಲು ಇಂಧನ ಬೆಲೆ ಏರಿಕೆ ಅನಿವಾರ್ಯ ಎಂದು ಹೇಳಿ ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ 1.40 ಬೆಲೆ ಏರಿಕೆ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಪೆಟ್ರೋಲ್ ದರ 77.98 ರು ಆಸುಪಾಸಿನಲ್ಲಿದೆ.
ಆಯಾ ರಾಜ್ಯದಲ್ಲಿ ಮೌಲ್ಯವರ್ಧಿತ ತೆರಿಗೆ ಮತ್ತು ಪ್ರವೇಶ ತೆರಿಗೆ ವಿಭಿನ್ನವಾಗಿರುವುದರಿಂದ ಪೆಟ್ರೋಲ್ ಬೆಲೆ ಏರಿಕೆಯಲ್ಲಿ ಏರಿಳಿತ ಕಂಡುಬರುತ್ತದೆ. ಡಾಲರ್‌ಗೆ ಪ್ರತಿಯಾಗಿ ರುಪಾಯಿ ಮೌಲ್ಯ ಇನ್ನಷ್ಟು ಸ್ಥಿರಗೊಂಡಿದ್ದರೆ ಇಂಧನ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇರುತ್ತದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೆಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲ್ ಸಂಸ್ಥೆ ಗಳು ಮಾರ್ಚ್ 31, 2012ಕ್ಕೆ ಅನ್ವಯವಾಗುವಂತೆ 4,860 ಕೋಟಿ ರು ನಷ್ಟ ದಾಖಲಿಸಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications