ಕೋರ್ ಕಮಿಟಿ ಸಭೆ ಪ್ರಾರಂಭ : ಅಧ್ಯಕ್ಷರ ಹುಡುಕಾಟ

ರಾಷ್ಟ್ರೀಯ ನಾಯಕರಾದ ಅರುಣ್ ಜೇಟ್ಲಿ, ಧರ್ಮೇಂದ್ರ ಪ್ರಧಾನ್, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್, ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಸಂಸದರಾದ ಪ್ರಹ್ಲಾದ್ ಜೋಷಿ, ನಳೀನ್ ಕುಮಾರ್ ಕಟೀಲ್, ಸಂಘ ಪರಿವಾರದ ಸಂತೋಷ್ ಜಿ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ಮತ್ತೊಮ್ಮೆ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎಂಬ ಮಾಹಿತಿ ಇದೆ. ಆದರೆ, ಅನಂತಕುಮಾರ್, ಆರ್ಎಸ್ಎಸ್ ಪ್ರಮುಖರು ಯಾರ ಹೆಸರಿಗೆ ಬೆಂಬಲ ಸೂಚಿಸುತ್ತಾರೆ ಎಂಬ ಅಂಶದ ಮೇಲೆ ರಾಜ್ಯಾಧ್ಯಕ್ಷೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ವಿಧಾನಸಭೆ ಚುನಾವಣೆ ಮುಂದಿಟ್ಟಿಕೊಂಡು ಅಧ್ಯಕ್ಷರ ಬದಲಾವಣೆ ಮಾಡಲಿರುವ ಬಿಜೆಪಿ, ಪಕ್ಷ ಸಂಘಟನೆ, ಕಾರ್ಯಕರ್ತರ ವಿಶ್ವಾಸಗಳಿಸಬಲ್ಲ ನಾಯಕನ ಹುಟುಕಾಟ ನಡೆಸುತ್ತಿದೆ. ಅಧ್ಯಕ್ಷರ ಹುದ್ದೆಗೆ ಉಪ ಮುಖ್ಯಮಂತ್ರಿ ಆರ್.ಅಶೋಕ್ ಮತ್ತು ಸಚಿವ ಗೋವಿಂದ ಕಾರಜೋಳ ಅವರನ್ನು ಆಯ್ಕೆ ಮಾಡಲು ಎಲ್ಲಾ ನಾಯಕರು ಸಹಮತ ವ್ಯಕ್ತಪಡಿಸಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಸಂಸದರಾದ ಪ್ರಹ್ಲಾದ್ ಜೋಷಿ, ನಳೀನ್ ಕುಮಾರ್ ಕಟೀಲ್ ಮತ್ತು ಸಚಿವ ಸಿ.ಟಿ.ರವಿ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿದ್ದು, ಸಭೆಯ ಬಳಿಕ ಅಂತಿಮ ಚಿತ್ರಣ ಹೊರಬರಲಿದೆ.
ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆ ನಡೆದರೂ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಜೊತೆ ಚರ್ಚಿಸಿದ ಬಳಿಕ ಅಧ್ಯಕ್ಷರ ಘೋಷಣೆಯಾಗಲಿದೆ. ಆದ್ದರಿಂದ ಅಧ್ಯಕ್ಷರು ಯಾರು? ಎಂಬ ಚಿತ್ರಣ ದೊರೆತರೂ, ಅವರ ಹೆಸರು ದೆಹಲಿಯಲ್ಲಿ ಘೋಷಣೆಯಾಗಲಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications