ಮಲೆಮಾದೇಶ್ವರ ದರ್ಶನ ಪಡೆದ ಎಸ್.ಎಂ.ಕೃಷ್ಣ

ಕೇಂದ್ರದಿಂದ ಮರಳಿರುವ ಕೃಷ್ಣ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಭೇಟಿ ಮಾಡಿದ ನಾಯಕರಿಗೆ ಸಲಹೆ ಸೂಚನೆ ನೀಡುತ್ತಿದ್ದಾರೆ. ಇಂತಹ ಸಮಯದಲ್ಲೇ ಅವರು ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಮಲೆಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾಜಕೀಯಕ್ಕೆ ಮರಳಲು ಕೃಷ್ಣ ತಯಾರಿ ನಡೆಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ನಂತರ ಕೃಷ್ಣ ರಾಜ್ಯ ರಾಜಕಾರಣಕ್ಕೆ ಮರಳುತ್ತಾರೆ ಎಂದು ಅವರ ಆಪ್ತ ಮೂಲಗಳು ಹೇಳಿದ್ದವು.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎರಡು ದಿನಗಳು ಬಾಕಿ ಇರುವಾಗಲೇ ಕೃಷ್ಣ ಮಲೆಮಹದೇಶ್ವರ ಸನ್ನಿಧಿಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ. ಎಸ್.ಎಂ.ಕೃಷ್ಣ ರಾಜಕೀಯಕ್ಕೆ ಬಂದು ಐವತ್ತು ವರ್ಷ ಕಳೆದಿದೆ. ಆದ್ದರಿಂದ ಕೆಪಿಸಿಸಿ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಾಗ ಕೃಷ್ಣ ಅವರು ರಾಜಕೀಯಕ್ಕೆ ಮರಳುತ್ತಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದರು. ಇಂದಿನ ದೇವಾಲಯ ಭೇಟಿ ರಾಜಕೀಯಕ್ಕೆ ಮರಳುವ ಸೂಚನೆಯೇ? ಎಂದು ರಾಜಕೀಯ ನಾಯಕರು ಆಲೋಚಿಸುತ್ತಿದ್ದಾರೆ.
ರಾಜಕೀಯ ಲೆಕ್ಕಾಚಾರಗಳೇನು ಇದ್ದರೂ ಕುಟುಂಬ ಸಮೇತರಾಗಿ ಕೃಷ್ಣ ಮಲೆಮಹದೇಶ್ವರನ ದರ್ಶನ ಮಾಡಿರುವುದಂತೂ ಸತ್ಯ. ಇದು ರಾಜಕೀಯಕ್ಕೆ ಮರಳುವ ಸೂಚನೆಯೇ ಎಂಬ ಪ್ರಶ್ನೆಗೆ ಕೆಲವು ದಿನಗಳಲ್ಲಿ ಉತ್ತರ ದೊರಕಲಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ


Click it and Unblock the Notifications
