ಶೋಭಾ ಕರಂದ್ಲಾಜೆ ಮುಂದಿನ ಮುಖ್ಯಮಂತ್ರಿ

ನಿಸ್ಸಂದೇಹವಾಗಿ ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ ಅವರನ್ನೇ ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸುವುದು ಶತಃಸಿದ್ಧ ಎಂದು ಪಿಸುಗುಟ್ಟುತ್ತಿವೆ KJP ಮೂಲಗಳು. ಇದರ ಮುನ್ಸೂಚನೆ ತಿಳಿದೇ ಯಡಿಯೂರಪ್ಪನವರ ಕೆಲ ಕಟ್ಟಾಳುಗಳು ಹುಷಾರಾಗಿಬಿಟ್ಟು ಶೋಭಾ ಅವರ ದಿಕ್ಕಿಗೂ ತಲೆಯಿಟ್ಟು ಮಲಗಿಲ್ಲ.
ಆದರೆ ಈ ಚಾಮರಾಜನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಕೆಜೆಪಿ ಕಾರ್ಯಕರ್ತರು ವಿಚಿತ್ರವಾದ ಸನ್ನಿವೇಶ ಎದುರಿಸುತ್ತಿದ್ದಾರೆ. ಇವರಿಗೆ ಇತ್ತ ಧರಿ ಅತ್ತ ಪುಲಿ ಎಂಬಂತಾಗಿದೆ.
ಆದರೂ ಶೋಭಾ ಅವರ ಪಾರುಪತ್ಯ ತಾಳದೆ ಸಿಡಿದೇಳುವ ಹಂತಕ್ಕೆ ತಲುಪಿದ್ದಾರೆ. ಶೋಭಾ ಅವರನ್ನು ಈ ಮೂರು ಜಿಲ್ಲೆಗಳ ಉಸ್ತುವಾರಿಯಿಂದ ದೂರವಿಟ್ಟರೆ ಮಾತ್ರ ತಾವು ಕೆಜೆಪಿ ಜತೆ ಗುರುತಿಸಿಕೊಳ್ಳುವುದಾಗಿ ಯಡಿಯೂರಪ್ಪಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಯಡಿಯೂರಪ್ಪಗೂ ಈ ಬಿಸಿ ತಾಕಿದೆ. ಮಂಡ್ಯದಲ್ಲೂ ಕೆಜೆಪಿ ಕಾರ್ಯಕರ್ತರ ಸಭೆಯಲ್ಲಿ ಇಂತಹುದೇ ವಿದ್ಯಮಾನ ಕಂಡುಬಂದಿದೆ.
ಹಾಗಾಗಿಯೇ, ಕೆಜೆಪಿಯಲ್ಲಿನ ಈ ಕೋಲಾಹಲ/ಗೊಂದಲ ನಿವಾರಣೆಗೆ ಯಡಿಯೂರಪ್ಪ ಮೈಸೂರಿಗೆ ದೌಡಾಯಿಸಿದ್ದಾರೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳ ಸಂದರ್ಭದಲ್ಲಿ ಈ ತಳಮಳ ಉಂಟಾಗಿರುವುದು ಯಡಿಯೂರಪ್ಪಗೆ ಬಿಸಿ ತುಪ್ಪವಾಗಿದೆ.
ಗುರುವಾರ ಸಂಜೆ ಯಡಿಯೂರಪ್ಪ ಅವರು ಚಿತ್ರದುರ್ಗದಿಂದ ನೇರವಾಗಿ ಮೈಸೂರಿನ ಖಾಸಗಿ ಹೋಟೆಲ್ ತಲುಪಿಕೊಂಡಿದ್ದಾರೆ. ಆದರೆ ಅಲ್ಲಿ ಅವರ ಸಮ್ಮುಖದಲ್ಲೇ ಕಾರ್ಯಕರ್ತರು ಮತ್ತು ಮುಖಂಡರು ಪರಸ್ಪರ ವಾಗ್ದಾಳಿ ನಡೆಸಿ, ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದಾರೆ. ಸಭ್ಯತೆ ಮೀರಿ ಒಬ್ಬರಿಗೊಬ್ಬರು ಬಯ್ದಾಡಿಕೊಂಡಿದ್ದಾರೆ.
ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಮಾಡಲು ವೀರಶೈವ ಸಮಾಜದ ಮುಖಂಡರನ್ನು ಯಡಿಯೂರಪ್ಪ ತುಳಿಯುತ್ತಿದ್ದಾರೆ, ಸಮಾಜಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ಚಾಮರಾಜನಗರ ಕೆಜೆಪಿ ಜಿಲ್ಲಾಧ್ಯಕ್ಷ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ ಬಹಿರಂಗವಾಗಿಯೇ ಆಪಾದಿಸಿದ್ದಾರೆ.
ಮುಖಂಡ ಆಲೂರು ಮಲ್ಲು ಮಹೇಶ್, ಪ್ರೊ. ಕೆಆರ್ ಮಲ್ಲಿಕಾರ್ಜುನಪ್ಪ ಮತ್ತಿತರರು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಹರಿಹಾಯ್ದ ಘಟನೆಯೂ ನಡೆದು, ಈ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸುವುದಾಗಿ ಅವರು ಹೇಳಿದ್ದಾರೆ.












Click it and Unblock the Notifications