ದ್ವೇಷ ಭಾಷಣ: ತೊಗಾಡಿಯಾರನ್ನು ಜೈಲಿಗೆ ಹಾಕಿ

ಪ್ರವೀಣ್ ತೊಗಾಡಿಯಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹಾಗೂ ಸಿಪಿಐಎಂ ನಾಯಕ ಸೀತಾರಾಮ್ ಯೆಚೂರಿ, ಕೋಮು ಸೌಹಾರ್ದ ಕದಡುವ ಧಾರ್ಮಿಕ ನಾಯಕರಿಗೆ ತಕ್ಕ ಶಿಕ್ಷೆ ನೀಡಲೇಬೇಕು ಎಂದಿದ್ದಾರೆ.
ಕೋಮು ಭಾವನೆಗಳನ್ನು ಕೆರಳಿಸುವ ದ್ವೇಷಪೂರಿತ ಭಾಷಣ ಮಾಡಿ ಕಾರಾಗೃಹ ಸೇರಿದ ಇಲ್ಲಿನ ಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಅವರಂತೆಯೇ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಡಾ. ಪ್ರವೀಣ್ ತೊಗಾಡಿಯಾ ಅವರೂ ದ್ವೇಷಪೂರಿತ ಭಾಷಣಕ್ಕಾಗಿ ಜೈಲು ಸೇರುವ ಸಾಧ್ಯತೆಗಳು ಕಾಣುತ್ತಿವೆ. ಅದಿಲಾಬಾದ್ ಹಾಗೂ ರಜೌಲಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಹಾಕಿರುವ ಸುದ್ದಿ ಬಂದಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಭೋಕಾರ್‌ನಲ್ಲಿ ಜನವರಿ 22ರಂದು ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ತೊಗಾಡಿಯಾ ಮಾಡಿದ ಕೋಮು ಪ್ರಚೋದಕ ಭಾಷಣದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್‌ನಲ್ಲಿ ಹರಿದಾಡುತ್ತಿವೆ. ಈ ಕುರಿತು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ದೂರು ದಾಖಲಾಗಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪೊಲೀಸರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದಂತೆ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದು, ಹೈದರಾಬಾದ್ ಪೊಲೀಸರು ಈಗಾಗಲೇ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕಾನೂನು ಉಲ್ಲಂಘನೆ ಕಂಡು ಬಂದರೆ ತಕ್ಷಣವೇ ಕ್ರಮ ಜರುಗಿಸಲಾಗುವುದು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಈ ಸಮಾರಂಭಕ್ಕೆ ಪೊಲೀಸರಿಂದ ಪೂರ್ವಾನುಮತಿ ಪಡೆಯಲಾಗಿತ್ತು ಎಂದು ನಾಂದೇಡ್ ಜಿಲ್ಲಾ ಪೊಲೀಸರು ಹೇಳಿದ್ದಾರೆ. ಓವೈಸಿಗೆ ಪ್ರತಿಕ್ರಿಯೆ ನೀಡಿದ ತೊಗಾಡಿಯಾ, ಅಸ್ಸಾಂನ ನೀಲ್ ಎಂಬಲ್ಲಿ ನಡೆದ ಕೋಮು ಗಲಭೆಯಲ್ಲಿ ಮೃತಪಟ್ಟ ಮೂರು ಸಾವಿರ ಜನರಲ್ಲಿ ಒಬ್ಬನೇ ಒಬ್ಬ ಹಿಂದೂವಿನ ಶವ ಇರಲಿಲ್ಲ ಎಂದು ತಿರುಗೇಟು ನೀಡಿದ್ದರು.
'ಭಾಗಲ್‌ಪುರದಲ್ಲಿ ಪೊಲೀಸರು ಇಲ್ಲದಿದ್ದಾಗ ನಡೆದ ಗಲಭೆಯಲ್ಲಿ ಮೃತಪಟ್ಟ ಅಸಂಖ್ಯಾತ ಜನರಲ್ಲಿ ಒಂದೂ ಶವ ಹಿಂದೂವಿನದಾಗಿರಲಿಲ್ಲ. ಮೊರಾದಾಬಾದ್, ಮೀರತ್, ಗುಜರಾತ್‌ನ ನದಿಗಳಲ್ಲಿ ತೇಲುತ್ತಿದ್ದ ಶವಗಳಲ್ಲಿ ಹಿಂದೂಗಳಿರಲಿಲ್ಲ' ಎಂದು ಸವಾಲು ಹಾಕಿದ್ದರು.
'ನಮ್ಮದು ಹೇಡಿಗಳ ಧರ್ಮವಲ್ಲ. ಭವಾನಿ ದೇವಿಯ ಕೈಯಲ್ಲಿ ಸದಾ ಆಯುಧಗಳಿರುತ್ತವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ' ಎಂದು ಓವೈಸಿ ರೀತಿಯಲ್ಲಿಯೇ ಹೇಳಿರುವ ವಿಡಿಯೋ ತುಣುಕುಗಳು ಯೂಟ್ಯೂಬ್‌ನಲ್ಲಿ ಹರಿದಾಡುತ್ತಿವೆ.(ಪಿಟಿಐ)












Click it and Unblock the Notifications