RSS ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೈದ ಪೂಜಾರಿ

ಅವರದೇ ಪಕ್ಷದ ಸುಷ್ಮಾ ಸ್ವರಾಜ್, ಉಮಾ ಭಾರತಿ ಮತ್ತು ಶೋಭಾ ಕರಂದ್ಲಾಜೆ ಬಗ್ಗೆ ಯಾಕೆ ಸುಮ್ಮನಿದ್ದಾರೆ? ಅವರನ್ನು ಮನೆಯಿಂದ ಹೊರಗೆ ಕಳುಹಿಸದಂತೆ ತಾಕೀತು ಮಾಡಿ, ಅಡುಗೆ ಮನೆಯಲ್ಲಿ ಕೂತು ಸುಮ್ಮನೆ ಅಡುಗೆ ಮಾಡಿಕೊಂಡು ಇರಲು ಹೇಳಿ ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿ ಹೇಳಿದ್ದಾರೆ.
'ನಮಸ್ತೇ ಸದಾ ವತ್ಸಲೇ ಮಾತೃಭೂಮಿ' ಎನ್ನುವ ನಿಮ್ಮ ಸಂಘ ಪರಿವಾರದವರು ಮಂಗಳೂರು ಪಬ್ ಮತ್ತು ಇತರೆಡೆ ಮಹಿಳೆಯರ ಮೇಲೆ ಹಲ್ಲೆ ನಡೆದಾಗ ಯಾಕೆ ಸುಮ್ಮನಾದಿರಿ? ಕೆಟ್ಟ ದಾರಿಯಲ್ಲಿ ಸಾಗುತ್ತಿರುವ ನಿಮ್ಮ ಪರಿವಾರದ ಯುವಕರಿಗೆ ಇನ್ನಾದರೂ ಒಳ್ಳೆ ದಾರಿಯಲ್ಲಿ ನಡೆಯಲು ಹೇಳಿ ಎಂದು ಜನಾರ್ಧನ ಪೂಜಾರಿ ತರಾಟೆಗೆ ತೆಗೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ನಗರದ ಪುರಭವನದಲ್ಲಿ ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡುತ್ತಿದ್ದ ಪೂಜಾರಿ, ರಾಜ್ಯವನ್ನು ಲೂಟಿ ಮಾಡುತ್ತಿರುವ ನಿಮ್ಮದೇ ಬಿಜೆಪಿ ಸರಕಾರದ ಬಗ್ಗೆ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ನಡೆಯುತ್ತಿರುವ ದಾಳಿಯ ಬಗ್ಗೆ ಮೊನ್ನೆಯ RSS ಸಮಾವೇಶದಲ್ಲಿ ನೀವು ಯಾಕೆ ಮಾತನಾಡಿಲ್ಲ ಎಂದು ಪೂಜಾರಿ, ಮೋಹನ್ ಭಾಗವತ್ ಅವರನ್ನು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಅನಂತರ ರಾಜ್ಯದ ಅಭಿವೃದ್ಧಿ ಕುಸಿದಿದೆ, ಅಸ್ಥಿರತೆ ಕಾಡುತ್ತಿದೆ. ಕರ್ನಾಟಕದ ಜನತೆ ತಲೆತಗ್ಗಿಸುವ ಹಾಗೆ ಬಿಜೆಪಿ ಸರಕಾರ ಆಡಳಿತ ನಡೆಸಿದೆ. ಇದನ್ನು ಭಾಗವತರೇ.. ನೀವು ಗಮನದಲ್ಲಿ ಇಟ್ಟುಕೊಳ್ಳಿ ಎಂದು ಜನಾರ್ದನ ಪೂಜಾರಿ ಹೇಳಿದ್ದಾರೆ.
ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಸರಕಾರದ ಸಚಿವ ಸಂಪುಟ ಹೇಳಿದ ಹಾಗೆ ರಾಜ್ಯಪಾಲರು ಭಾಷಣ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ದತಿ. ಹಾಗಾಗಿ ರಾಜ್ಯಪಾಲರು ಮೊನ್ನೆ ಮಾತನಾಡಿದ್ದು ಸತ್ಯವಲ್ಲ ಎಂದು ಪೂಜಾರಿ ಹೇಳಿದ್ದಾರೆ.
ಮಹಿಳೆಯರ ಶೋಷಣೆಯ ವಿರುದ್ದ ಹೋರಾಟ ನಡೆಯಬೇಕು. ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಮಹಿಳೆಯರ ಕಾಳಜಿಗಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ಹಾಗಾಗಿ ಮಹಿಳೆಯರಿಗೆ ಅವರಿಬ್ಬರೂ ಆದರ್ಶಪ್ರಾಯರು ಎಂದು ಪೂಜಾರಿ ಗಾಂಧಿ ಪರಿವಾರವನ್ನು ಹೊಗಳಿದ್ದಾರೆ.












Click it and Unblock the Notifications