ಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಜೈಲಿಗೆ

ಸಂಸದ ಓವೈಸಿ ಬಂಧನ ನಂತರ ಹೈದರಾಬಾದಿನ ಕೆಲವೆಡೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಅಲ್ಲಲ್ಲಿ ಎಂಐಎಂ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿರುವ ದೃಶ್ಯಗಳು ಕಂಡು ಬಂದಿದೆ. ಇತ್ತ ಕೋರ್ಟಿಗೆ ಶರಣಾದ ಸಂಸದ ಓವೈಸಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
2005ರಲ್ಲಿ ಮೇದಕ್ ಜಿಲ್ಲಾಧಿಕಾರಿ ಅವರನ್ನು ನಿಂದಿಸಿದ ಆರೋಪ ಹೊತ್ತಿರುವ Majlis-e-Ittehad-ul Muslimeen(ಎಂಐಎಂ) ಸಂಸದ ಅಸಾದುದ್ದೀನ್ ಅವರು ಹಲವು ಬಾರಿ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದರು. ಓವೈಸಿ ಸೋದರರ ಮೇಲೆ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು.
ಓವೈಸಿ ಸೋದರರು ಹಾಗೂ ಪಕ್ಷದ ಇತರೆ ಕಾರ್ಯಕರ್ತರು ಮೇದಕ್ ಜಿಲ್ಲಾಧಿಕಾರಿಯಾಗಿದ್ದ ಅನಿಲ್ ಕುಮಾರ್ ಸಿಂಘಾಲ್ ಅವರ ವಿರುದ್ಧ ಹರಿಹಾಯ್ದಿದ್ದಲ್ಲದೆ, ಪ್ರತಿಭಟನೆ ನಡೆಸಿದ್ದರು.
2005ರ ಏಪ್ರಿಲ್ 16ರಂದು ಪತನ್ ಚೇರು ಮಂಡಲದ ಮುತಂಗಿ ಗ್ರಾಮದಲ್ಲಿ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದ ಜಿಲ್ಲಾಧಿಕಾರಿ ಅನಿಲ್ ಕುಮಾರ್ ಅವರಿಗೆ ಎಂಐಎಂ ಮುಖ್ಯಸ್ಥರಿಂದ ಪ್ರತಿಭಟನೆಯ ಸ್ವಾಗತ ಸಿಕ್ಕಿತ್ತು.
ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಆರೋಪದ ಮೇಲೆ ಎಂಐಎಂ ಮುಖ್ಯಸ್ಥ ಅಸಾದುದ್ದೀನ್, ತಮ್ಮ ಅಕ್ಬರುದ್ದೀನ್ ಹಾಗೂ ಇತರೆ ಕಾರ್ಯಕರ್ತರ ಮೇಲೆ ಪತನ್ ಚೆರವು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಓವೈಸಿ ಸೋದರರ ಮೇಲೆ ಗಲಭೆ, ಗುಂಪು ಘರ್ಷಣೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ, ಧಾರ್ಮಿಕ ಭಾವನೆ ಧಕ್ಕೆ ಮುಂತಾದ ಆರೋಪಗಳನ್ನು ಹೊರೆಸಿ ಐಪಿಸಿ ಸೆಕ್ಷನ್ 147,153 A,353,290,295,506 ರ ಅನ್ವಯ ಪ್ರಕರಣ ದಾಖಲಿಸಲಾಗಿತ್ತು.
ಸಂಸದ ಓವೈಸಿ ಸೋದರ ಅಕ್ಬರುದ್ದೀನ್ ಓವೈಸಿ ಅವರು ಧಾರ್ಮಿಕ ನಿಂದನೆ ಭಾಷಣ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿ ಚಂಚಲಗುಡ ಜೈಲು ಸೇರಿರುವುದನ್ನು ಇಲ್ಲಿ ಸ್ಮರಿಸಬಹುದು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಅಕ್ಬರುದ್ದೀನ್ ಅವರನ್ನು ಮೇದಕ್ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆದರೆ, ಪ್ರಕರಣದ ವಿಚಾರಣೆ ಜ.28ಕ್ಕೆ ಮುಂದೂಡಲ್ಪಟ್ಟಿತ್ತು.












Click it and Unblock the Notifications