ಕ್ರೇನ್ ಗೆ ಹೆಲಿಕಾಪ್ಟರ್ ಡಿಕ್ಕಿ: ಇಬ್ಬರ ಸಾವು
ಲಂಡನ್, ಜ. 16: ನಗರದ ಮಧ್ಯ ಭಾಗದಲ್ಲಿ ಥೇಮ್ಸ್ ನದಿ ಸಮೀಪ ಒಂದು ಹೆಲಿಕಾಪ್ಟರ್ ಕಟ್ಟಡ ನಿರ್ಮಾಣದ ಬೃಹತ್ ಕ್ರೇನ್ ಗೆ ಡಿಕ್ಕಿ ಹೊಡೆದು, ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರಿಗೆ ತೀವ್ರ ಗಾಯಗಳಾಗಿವೆ.
ಸ್ಥಳೀಯ ಕಾಲಮಾನದಲ್ಲಿ ಇಂದು ಬೆಳಗ್ಗೆ ಜನದಟ್ಟಣೆ ಜಾಸ್ತಿಯಿರುವಾಗ ಈ ಅಪಘಾತ ಸಂಭವಿಸಿದೆ. ಹೆಲಿಕಾಪ್ಟರ್ ಅವಶೇಷಗಳು ಹೊತ್ತಿ ಉರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಅಪಘಾತ ಸ್ಥಳಕ್ಕೆ ಹತ್ತಿರವಾಗಿರುವ ವಾಟರ್ ಲೂ ರೈಲ್ವೆ ನಿಲ್ದಾಣದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಅಪಘಾತ ಸ್ಥಳದಿಂದ ತುಸು ದೂರದಲ್ಲಿ ಬ್ರಿಟೀಷ್ ಸೇನಾ ಗುಪ್ತಚರ ಕೇಂದ್ರವಿದೆ. ಮತ್ತು ಅಮೆರಿಕ ರಾಯಭಾರ ಕಚೇರಿಯೂ ಇದೆ. ಸುಮಾರು 60ಕ್ಕೂ ಹೆಚ್ಚು ಅಗ್ನಿಶಾಮಕ ದಳ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.
ಅಪಘಾತಕ್ಕೀಡಾದ ಹೆಲಿಕಾಪ್ಟರಿನಲ್ಲಿ ಒಬ್ಬ ಪೈಲಟ್ ಮಾತ್ರ ಇದ್ದರು. ವಸತಿ ಪ್ರದೇಶದಲ್ಲಿ ಕೆಳ ಹಂತದಲ್ಲಿ ಹೆಲಿಕಾಪ್ಟರ್ ಚಲಿಸುತ್ತಿತ್ತು. ಬಹುಶಃ ಇದೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Augusta 109 ಹೆಸರಿನ ಹೆಲಿಕಾಪ್ಟರ್ ಅಪಘಾತಕ್ಕೀಡಾಗುತ್ತಿದೆ ಬೆಂಕಿಯುಂಡೆಯಾಗಿದೆ. ಅದರ ಅವಶೇಷಗಳು ಎರಡು ಕಾರುಗಳ ಮೇಲೆ ಬಿದ್ದು, ಅವೆರಡೂ ಸಂಪೂರ್ಣವಾಗಿ ಭಸ್ಮವಾಗಿವೆ.












Click it and Unblock the Notifications