ರಾಜಕೀಯ ಪಡಸಾಲೆಯಲ್ಲಿ 'ಶೋಭಾ'ಯ ವಿದ್ಯಮಾನಗಳು
ಬೆಂಗಳೂರು, ಜ. 9: ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಒಂದಷ್ಟು 'ಶೋಭಾ'ಯಮಾನ ವಿದ್ಯಮಾನಗಳು ಘಟಿಸುತ್ತಿವೆ. ಮತ್ತು ಅವು ಬಿಜೆಪಿ ಸರಕಾರದಿಂದ ಒಂದು ಕಾಲು ಹೊರಗಿಟ್ಟಿರುವ ರಾಜಕೀಯ ಚದುರಂಗ ಚತುರೆ ಶೋಭಾ ಕರಂದ್ಲಾಜೆ ಅವರ ಸುತ್ತ ಗಿರಕಿ ಹೊಡೆದಿವೆ ಎಂಬುದು ಗಮನಾರ್ಹ.
ಗೆಲ್ಲಿಸುವ ಭರವಸೆ ನೀಡಿದರಷ್ಟೇ ಸ್ಪರ್ಧೆ:
'ಬಿಜೆಪಿ ತೊರೆದು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸೇರುವುದು ಖಚಿತ. ಆದರೆ, ಬೆಂಬಲಿಗರು ಗೆಲ್ಲಿಸುವ ಭರವಸೆ ನೀಡಿದರಷ್ಟೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ' ಎಂಬುದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರ ಮನದಾಳದ ಇಂಗಿತ. ಈ ಸಂಬಂಧ, ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು, ಅಭಿಮಾನಿಗಳೊಂದಿಗೆ ಶೋಭಾ ಸರಣಿ ಮಾತುಕತೆ ನಡೆಸಿದ್ದಾರೆ.

'ಸಂಕ್ರಾಂತಿ ನಂತರ ಸಚಿವ ಸ್ಥಾನ ಮತ್ತು ಬಿಜೆಪಿಗೆ ರಾಜೀನಾಮೆ ನೀಡಿ, ಕೆಜೆಪಿ ಸೇರುತ್ತೇನೆ. ಬಿಜೆಪಿಯಲ್ಲಿ ಒಬ್ಬರ ಮುಖ ಇನ್ನೊಬ್ಬರು ನೋಡುವ ಸ್ಥಿತಿ ಇಲ್ಲ. ಈ ಬೆಳವಣಿಗೆಗಳಿಂದ ಆ ಪಕ್ಷ ತೊರೆಯುವುದು ಅನಿವಾರ್ಯವಾಗಿದೆ' ಎಂದೂ ಅವರು ಮುಖಂಡರಿಗೆ ವಿವರಿಸಿದ್ದಾರೆ ಎನ್ನಲಾಗಿದೆ.
ಒಟ್ಟಾರೆಯಾಗಿ ಶೋಭಾ ಬಿಜೆಪಿ ಬಿಡುವುದು, KJP ಅಪ್ಪಿಕೊಳ್ಳುವುದು ಒಂದು ನಡೆಯಾದರೆ ರಾಜಾಜಿನಗರ, ಯಶವಂತಪುರ, ಮೈಸೂರು, ಅಥವಾ ಪುತ್ತೂರು ಹೀಗೆ ಯಾವುದು ತಮಗೆ ಹಿತ ಎಂಬುದನ್ನು ಶೋಭಾನೂ ಅಳೆಯುತ್ತಿದ್ದಾರೆ.
ಒಂದು ಅಂದಾಜಿನ ಪ್ರಕಾರ ಶೋಭಾಗೆ ಯಶವಂತಪುರ ಬಿಟ್ಟು KJPಯಿಂದ ರಾಜಾಜಿನಗರ ಕ್ಷೇತ್ರಕ್ಕೆ ವಲಸೆ ಹೋಗುವ ಆಶಯವೂ ಇದೆ. ಆದರೆ ಯಶವಂತಪುರ ಕ್ಷೇತ್ರದಲ್ಲಿ ಶೋಭಾ ಮೇಡಂ ಅವರು ನಿಜಕ್ಕೂ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದಾರೆ. 'ಕಾರ್ಯತತ್ಪರ ಸಚಿವೆ' ಎಂದೂ ಹೆಸರು ಗಳಿಸಿದ್ದಾರೆ. 'ಇದನ್ನೆಲ್ಲ ಬಂಡವಾಳವಾಗಿಸಿಕೊಂಡು ಯಶವಂತಪುರದಿಂದಲೇ ಸ್ಪರ್ಧಿಸಿ' ಎಂಬ ಕೂಗು ಬೆಂಬಲಿಗರ ಮಧ್ಯೆ ಎದ್ದಿದೆ.
ಈ ಮಧ್ಯೆ, ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಮೈಸೂರಿನಲ್ಲೂ ಒಳ್ಳೆಯ ಹೆಸರು ಸಂಪಾದಿಸಿರುವ ಶೋಭಾಗೆ ಅಲ್ಲಿನ ಬೆಂಬಲಿಗರು 'ಮೇಡಂ, ನೀವು ಮೈಸೂರಿನಿಂದಲೇ ಏಕೆ ಸ್ಪರ್ಧಿಸಬಾರದು' ಎಂದು ಅಲವತ್ತುಕೊಂಡಿದ್ದಾರೆ.
ಇದೇ ವೇಳೆ, ಅತ್ತ ತವರೂರು ಪುತ್ತೂರು ಹೇಗೆ ಎಂಬ ಸಂಭಾವ್ಯತೆಯ ಬಗ್ಗೆಯೂ ಮಾತುಕತೆ ನಡೆದಿದೆ. ಅಲ್ಲಿ ಶಕ್ಕು ಅಕ್ಕ ಸದ್ಯಕ್ಕೆ ಯಡಿಯೂರಪ್ಪ ಪರ ಇದ್ದಾರೆ. ಹಳೆಯ ದ್ವೇಷ ಮರೆತು ಶೋಭಾ ಕೈಹಿಡಿಯಬಹುದಾದರೂ ಅಲ್ಲಿ 'ಗೌಡ್ರ ಗದ್ಲ' ಜೋರಾಗಿಯೇ ಕೇಳಿಬಂದಿದೆ. ಒಂದೆಡೆ ಸದಾನಂದ ಗೌಡರು ಮತ್ತೊಂದು ಕಡೆ ಕುಮಾರಸ್ವಾಮಿ ತಮ್ಮ ಹಗೆ ಸಾಧಿಸಲು ಹಾತೆರೆಯುತ್ತಿದ್ದಾರೆ. ಹಾಗಾಗಿ ಪುತ್ತೂರು ತವರೇ ಆದರೂ ಅದು ಸುರಕ್ಷಿತವಲ್ಲ ಎಂಬುದು ಶೋಭಾ ಕಂಡುಕೊಂಡಿರುವ ಕಹಿಸತ್ಯ.
ಈ ಮಧ್ಯೆ, ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ಬಿಜೆಪಿ ಸರಕಾರಕ್ಕೆ ಸಾಯೋ ಕಾಲ ಸನ್ನಿಹಿತವಾಗಿದ್ದು, ಶೋಭಾ ಕರಂದ್ಲಾಜೆ ರಾಜೀನಾಮೆಯಿಂದಲೇ ಬಿಜೆಪಿ ಸರಕಾರ ಪತನವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ ಕೊಪ್ಪಳದಲ್ಲಿ ಹೇಳಿರುವುದು ಇಂಟರೆಸ್ಟಿಂಗ್ ಆಗಿದೆ.












Click it and Unblock the Notifications