ಥತ್, ದೆಹಲಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ

ಇದು ವಿಪರ್ಯಾಸವೋ, ಮಹಿಳೆಯರ ಅಮಾಯಕತೆಯೋ, ಪರಿಸ್ಥಿತಿಯ ವಿಕಟ ಹಾಸವೋ... ಅಂತೂ ಅತ್ಯಾಚಾರಗಳ ರಾಜಧಾನಿ ಎಂದು ಹಣೆಪಟ್ಟಿ ಅಂಟಿಸಿಕೊಂಡಿರುವ ದೆಹಲಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣ ದಾಖಲಾಗಿದೆ. ಡಿ.16ರಂದು ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ದೌರ್ಜನ್ಯ ನಡೆದ ನಂತರ ಮದುವೆಯಾದ ಮಹಿಳೆಯನ್ನು ಸಾಮೂಹಿಕವಾಗಿ ಅತ್ಯಾಚಾರಕ್ಕೊಳಪಡಿಸಲಾಗಿದೆ.
ಈ ಬಾರಿ 20 ವರ್ಷದ ಗೃಹಿಣಿಯನ್ನು ಐವರು ಅಪಹರಿಸಿ, ದೆಹಲಿ ಹೊರವಲಯದಲ್ಲಿರುವ ಭಕ್ತಾವಾಪುರದಲ್ಲಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಈ ಘಟನೆ ನಡೆದಿರುವುದು ಹೊಸವರ್ಷದ ಮೊದಲನೇ ದಿನದಂದು. ಆದರೆ, ಪ್ರಕರಣ ದಾಖಲಾಗಿರುವುದು ಜ.6ರಂದು. ಈ ಘಟನೆಗೆ ಸಂಬಂಧಿಸಿದಂತೆ 3 ಅತ್ಯಾಚಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.
ಆಗ್ರಾದಲ್ಲಿ ತನ್ನ ಗಂಡನೊಂದಿಗೆ ಬಾಳುವೆ ನಡೆಸುತ್ತಿರುವ 20 ವರ್ಷದ ಮಹಿಳೆ ಜನವರಿ 1ರಂದು ತನ್ನ ಸಂಬಂಧಿಕರ ಮನೆಗೆ ಬಂದಿದ್ದರು. ನೆರೆಹೊರೆಯಲ್ಲಿರುವ ಮತ್ತು ಮಹಿಳೆಗೆ ಪರಿಚಯವಿರುವ ಕೆಲ ಯುವಕರು ಆಕೆಯನ್ನು ಮನವೊಲಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ನಂತರ ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿ ಐವರು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ.
ಮಹಿಳೆಯರು, ಯುವತಿಯರು ರಾತ್ರಿ ಹೊತ್ತಿನಲ್ಲಿ ತಿರುಗಬಾರದು, ಅಪರಿಚಿತ ಯುವಕರೊಂದಿಗೆ ಕರೆದಲ್ಲಿ ಹೋಗಬಾರದು, ಯಾವಾಗಲೂ ಎಚ್ಚರದಿಂದಿರಬೇಕು ಎಂಬ ಕೂಗು ಎದ್ದಿದ್ದರೂ ಈ ಯುವತಿ ಆ ಪುರುಷರೊಂದಿಗೆ ಹೋಗಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಸ್ವತಃ ಸಂಬಂಧಿಕರನ್ನೇ ನಂಬದಂತಹ ಪರಿಸ್ಥಿತಿ ಇರುವಾಗ ಅಕ್ಕಪಕ್ಕದ ಯುವಕರೊಂದಿಗೆ ಹೋಗಿ ಮಹಿಳೆ ಮಾನ ಕಳೆದುಕೊಂಡಿದ್ದಾರೆ.
ಅತ್ಯಾಚಾರದ ವಿರುದ್ಧ ದೇಶದಾದ್ಯಂತ ಆಕ್ರೋಶ ಭುಗಿಲೆದ್ದ ನಂತರ ನಾಯಕರನೇಕರು ತಮಗೆ ತಿಳಿದಂತೆ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ ಮತ್ತು ವಿವಾದಗಳಿಗೂ ಸಿಲುಕಿಕೊಳ್ಳುತ್ತಿದ್ದಾರೆ. ಸ್ವಯಂಘೋಷಿತ ಆಧ್ಯಾತ್ಮಿಕ ಗುರು ಆಸಾರಾಮ್ ಬಾಪು ಎಂಬುವವರು, ಒಂದೇ ಕೈಯಲ್ಲಿ ಚಪ್ಪಾಳೆ ಹೊಡೆಯಲು ಸಾಧ್ಯವೆ? ಎಂದು ಪ್ರಶ್ನಿಸಿದ್ದಕ್ಕೆ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಅವರು, ಮಹಿಳೆಯರು ಮನೆಯಲ್ಲಿದ್ದುಕೊಂಡು ಗಂಡನ ಅಗತ್ಯಗಳನ್ನು ಪೂರೈಸಬೇಕು ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದಾರೆ.












Click it and Unblock the Notifications