ಮಹಿಳೆಯರಿಗಾಗಿ 24 X 7 ಸಹಾಯವಾಣಿ ಚಾಲನೆ

ಮಹಿಳೆಯರ ಸುರಕ್ಷತೆಗಾಗಿ ಒಂದಷ್ಟು ಅಗತ್ಯ ಕ್ರಮಗಳನ್ನು ಬಿಜೆಪಿ ಸರ್ಕಾರ ಕೈಗೊಂಡಿದೆ. ಅದರಲ್ಲಿ ಮುಖ್ಯವಾಗಿ 24 X 7 ಮಹಿಳಾ ಸಹಾಯವಾಣಿ ಸೇರಿದೆ.
ದೌರ್ಜನ್ಯ, ಲೈಂಗಿಕ ಹಿಂಸೆ, ಕಿರುಕುಳ, ಅತ್ಯಾಚಾರ ಯತ್ನ ಈ ರೀತಿ ಯಾವುದೇ ಕಷ್ಟದ ಪರಿಸ್ಥಿತಿ ಒದಗಿ ಬಂದರೂ ಮಹಿಳಾ ಸಹಾಯವಾಣಿ ಸಂಖ್ಯೆ 1091ಕ್ಕೆ ತಪ್ಪದೇ ಕರೆ ಮಾಡಬಹುದು. ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ ದಿನವೀಡಿ ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ ಎಂದು ಗೃಹ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಕರ್ನಾಟಕ ಸರ್ಕಾರ ಹಿಂದೆ ಬಿದ್ದಿಲ್ಲ. ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದರು.
ಮಹಿಳಾ ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದ ಸಚಿವ ಆರ್ ಅಶೋಕ್, ನಗರದ ಎಲ್ಲೆಡೆ ಇರುವ ಪಿಜಿ(paying guest) ಹೋಂ ಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಎಲ್ಲಾ ಪಿಜಿಗಳು ಆಯಾ ವಲಯದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು. ಎಷ್ಟು ಮಂದಿ ಹುಡುಗಿಯರು ಪಿಜಿಯಲ್ಲಿದ್ದಾರೆ? ಅವರ ವಿವರಗಳನ್ನು ಪೊಲೀಸ್ ಠಾಣೆಗೆ ತಪ್ಪದೇ ತಿಳಿಸಬೇಕಾಗುತ್ತದೆ.
* ಲೈಂಗಿಕ ದೌರ್ಜನ್ಯ ಪ್ರಕರಣಗಳ ಮೇಲೆ ನಿಗಾವಹಿಸಲು ಸಾರಿಗೆ ಸಂಸ್ಥೆ ಬಸ್‌ಗಳಲ್ಲೂ ಸೂಕ್ತ ಮಾಹಿತಿ ಒದಗಿಸುವುದಲ್ಲದೇ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯ ಟ್ರಾವೆಲ್ ಏಜೆನ್ಸಿಗಳು ತಮ್ಮ ಸಂಸ್ಥೆ, ಕೆಲಸ ಮಾಡುವ ಚಾಲಕರ ನೋಂದಾವಣೆ ಮಾಡಿಸಲು ಸೂಚಿಸಲಾಗಿದೆ.
* ಬಹುರಾಷ್ಟ್ರೀಯ ಕಂಪೆನಿಗಳು, ಐಟಿ ಕಂಪೆನಿಗಳಿಂದ ಹಿಡಿದು ಎಲ್ಲಾ ಬಗೆಯ ಕಂಪೆನಿಗಳು ತಮ್ಮಲ್ಲಿ ರಾತ್ರಿಪಾಳಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳ ವಿವರ ಕೊಡುವುದಲ್ಲದೆ, ಅವರಿಗೆ ಒದಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸುವುದು ಕಡ್ಡಾಯ.
* ಟ್ರಾವೆಲ್ ಏಜೆನ್ಸಿಗಳಿಂದ ಕಂಪೆನಿಗಳಿಗೆ ನೀಡುವ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಸೇರಿದಂತೆ ಪ್ರತಿಯೊಂದು ವಾಹನಗಳ ಚಾಲಕರು, ಅವರ ಭಾವಚಿತ್ರ ಸಹಿತ ವಿವರ, ಬೆರಳು ಗುರುತು ನೀಡುವುದು ಕಡ್ಡಾಯ.
* ವಿಶ್ವವಿದ್ಯಾಲಯ ಆವರಣ, ಮಿಲಿಟರಿ ಪ್ರದೇಶ, ವಿಮಾನ ನಿಲ್ದಾಣ ಸೇರಿದಂತೆ ಜನಸಂಚಾರ ಕಡಿಮೆ ಇರುವ ಪ್ರದೇಶಗಳ ಮ್ಯಾಪಿಂಗ್ ಮಾಡುತ್ತಿದ್ದು, ಅಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗುವುದು.
* ಸಾರಿಗೆ ಸಂಸ್ಥೆಯ 6 ಸಾವಿರ ಬಸ್‌ಗಳ ಪೈಕಿ ಒಂದು ಸಾವಿರ ಬಸ್‌ಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು.
* ಸಾರ್ವಜನಿಕ ಪ್ರದೇಶ, ಕಾಲೇಜು ಆವರಣಗಳಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.












Click it and Unblock the Notifications