ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಬಂಧನ

ಕೆಜೆಪಿ ಕಾರ್ಯಕರ್ತರು ಫ್ರೀಡಂ ಪಾರ್ಕ್ ಸಭೆಯ ಬಳಿಕ ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧ ಚಲೋ ನಡೆಸಲು ಮುಂದಾದರು. ಆ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಯಡಿಯೂರಪ್ಪ ಸೇರಿದಂತೆ ಅನೇಕ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ವಿಧಾನಸೌಧ ಸುತ್ತಮುತ್ತ ಪ್ರತಿಬಂಧಕಾಜ್ಞೆ ಜಾರಿಯಲ್ಲಿದೆ.
ಆದರೆ, ಇತ್ತ ಯಡಿಯೂರಪ್ಪ ನೇತೃತ್ವದಲ್ಲಿ ಕೆಜೆಪಿ ಕಾರ್ಯಕರ್ತರು ವಿಧಾನ ಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗ ಅತ್ತ ವಿಧಾನಸೌಧದಲ್ಲಿ ಯಾವೊಬ್ಬ ಸಚಿವರೂ ಇರಲಿಲ್ಲ. ಮುಖ್ಯವಾಗಿ ಮುಖ್ಯಮಂತ್ರಿ ಶೆಟ್ಟರ್, ಉಪಮುಖ್ಯಮಂತ್ರಿಗಳಾದ ಅಶೋಕ್, ಈಶ್ವರಪ್ಪ ಅವರುಗಳು ದೂರದ ಗುಜರಾತಿಗೆ ತೆರಳಿ, ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಇಂದು ನಾಲ್ಕನೆಯ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಸಾಕ್ಷಿಯಾಗಿದ್ದರು.
ಫ್ರೀಡಂ ಪಾರ್ಕಿನಲ್ಲಿ ಕೆಜೆಪಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು 'ಶೆಟ್ಟರ್ ಸರಕಾರ ಅಲ್ಪಮತಕ್ಕೆ ಕುಸಿದಿದೆ. ಹಾಗಾಗಿ ತಕ್ಷಣ ರಾಜೀನಾಮೆ ಸಲ್ಲಿಸಿ, ಜನಾದೇಶಕ್ಕೆ ಹೋಗಬೇಕು' ಎಂದು ಆಗ್ರಹಿಸಿದ್ದಾರೆ.
'ತಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಅನೇಕ ಜನಪರ ಯೋಜನೆಗಳನ್ನು ಮುಖ್ಯಮಂತ್ರಿ ಶೆಟ್ಟರ್ ಅವರು ಪೋಷಿಸಿಕೊಂಡು ಬಂದಿಲ್ಲ. ಹಲವು ಯೋಜನೆಗಳನ್ನು ಸ್ಥಗಿತಗೊಳಿಸಿದ್ದರೆ ಕೆಲವು ಯೋಜನೆಗಳಿಗೆ ಹಣಕಾಸನ್ನು ಬಿಡುಗಡೆ ಮಾಡುತ್ತಿಲ್ಲ. ಇದು ಸಿಎಂ ಶೆಟ್ಟರ್ ಅವರು ಅಳವಡಿಸಿಕೊಂಡಿರುವ ತಾರತಮ್ಯ ನೀತಿಯಾಗಿದೆ' ಎಂದು ಯಡಿಯೂರಪ್ಪ ಕಿಡಿಕಾರಿದ್ದಾರೆ.












Click it and Unblock the Notifications