ಕೃಷ್ಣ ಆಬ್ಸೆಂಟ್: ಕಾಂಗ್ರೆಸ್ಸಿನಿಂದ ಮತಬೇಟೆ ಆರಂಭ

ಆದರೆ ಇಡೀ ಕಾಂಗ್ರೆಸ್ ಕುಟುಂಬ ಒಂದೇ ಬಸ್ಸಿನಲ್ಲಿ ಕೋಲಾರಕ್ಕೆ ಆಗಮಿಸಿದ್ದು ಐಕ್ಯತೆಯ ಸಂದೇಶ ಸಾರಿದಂತಿತ್ತು. ಚುನಾವಣೆ ಮುಗಿಯುವವರೆಗೂ ಮತಬೇಟೆ ನಿಮಿತ್ತ ಈ ಪ್ರವಾಸ ರಾಜ್ಯಾದ್ಯಂತ ನಡೆಯಲಿದೆ. ಈ ಮಧ್ಯೆ, ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ವೀರಪ್ಪ ಮೊಯ್ಲಿ ಅವರ ಅನುಪಸ್ಥಿತಿಯೂ ಎದ್ದುಕಾಣುತ್ತಿತ್ತು.
ನಿನ್ನೆ ಇಲ್ಲಿ ನಡೆದ ಬೃಹತ್ ಸಮಾವೇಶದ ಮಟ್ಟಿಗೆ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ನಾಯಕತ್ವ ವಹಿಸಿದ್ದರಾದರೂ ಸಮೂಹ ನಾಯಕತ್ವದಲ್ಲಿ ಪಕ್ಷ ಮುಂದಿನ ಚುನಾವಣೆಯಲ್ಲಿ ಹೋರಾಡಲಿದೆ ಎಂದು ಘೋಷಿಸಿದ್ದಾರೆ. ಎಂದಿನಂತೆ ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದ ಖರ್ಗೆ, ರಾಜ್ಯ ಸರಕಾರ ಕೋಮಾ ಸ್ಥಿತಿಗೆ ತಲುಪಿದ್ದು, ಆಡಳಿತ ಹದಗೆಟ್ಟಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವು ನಗರದ ಸರಕಾರಿ ಕಿರಿಯ ಕಾಲೇಜು ಮೈದಾನದಲ್ಲಿ 'ಕಾಂಗ್ರೆಸ್‌ಗೆ ಬನ್ನಿ- ಬದಲಾವಣೆ ತನ್ನಿ' ಎಂಬ ಘೋಷವಾಕ್ಯದೊಂದಿಗೆ ಕಾರ್ಯಕರ್ತರ ಸಮಾವೇಶವನ್ನು ಭಾನುವಾರ ಆಯೋಜಿಸಿತ್ತು.
ಜನಪರ ಮತ್ತು ಸ್ವಚ್ಛ ಆಡಳಿತ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ, ರಾಜ್ಯದ ಜನರಿಗೆ ವಂಚನೆ ಮಾಡಿದೆ. ಬಿಜೆಪಿ ಸರಕಾರದ ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ರಾಜ್ಯದ ಜನತೆ ನೊಂದಿದ್ದಾರೆ. ಬಿಜೆಪಿ ಸರಕಾರದ ಪತನಕ್ಕೆ ದಿನಗಣನೆ ಆರಂಭವಾಗಿದೆ. ಗಿಡವಾಗಿದ್ದ ಬಿಜೆಪಿ ಮರವಾಗಿ ಬೆಳೆಯಲು ಜೆಡಿಎಸ್ ಪಕ್ಷ ಕಾರಣವಾಗಿದೆ ಎಂದು ಖರ್ಗೆ ಲೇವಡಿಯಾಡಿದರು.
ಕಾಂಗ್ರೆಸ್ಸಿಗೆ ಲಕ್ಕಿ ಕೋಲಾರ ಜಿಲ್ಲೆ: ಕೋಲಾರ ಜಿಲ್ಲೆ ಮೊದಲಿಂದಲೂ ಪ್ರಗತಿ ಪರ ಚಳವಳಿ/ಚಿಂತನೆಗೆ ಖ್ಯಾತಿಯಾಗಿದೆ. ಆದ್ದರಿಂದ ಜಿಲ್ಲೆಯಿಂದಲೇ ಕಾಂಗ್ರೆಸ್ ಪ್ರಚಾರ ಆರಂಭಿಸಿದೆ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಭೂ ಸುಧಾರಣೆ ಮತ್ತು ಹಿಂದುಳಿದ ವರ್ಗಗಳು ಹಾಗೂ ದಲಿತರ ಅಭಿವೃದ್ಧಿಗಾಗಿ ದುಡಿದಿದೆ ಎಂದು ಖರ್ಗೆ ನುಡಿದರು.
ಸರಕಾರಿ ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಬಡ್ತಿ ನೀಡಲು ಕೇಂದ್ರ ಸರಕಾರ ನಿಯಮಗಳಿಗೆ ತಿದ್ದುಪಡಿ ಮಾಡಲು ಚಿಂತನೆ ನಡೆಸಿದೆ. ಆದರೆ, ಬಿಜೆಪಿ ಅಡ್ಡಗಾಲು ಹಾಕುವ ಮೂಲಕ ದಲಿತ ವಿರೋಧಿ ನೀತಿ ವ್ಯಕ್ತಪಡಿಸಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಸಮಾವೇಶವನ್ನು ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಉದ್ಘಾಟಿಸಿದರು. ಮಾಜಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕ ಎಸ್ಆರ್ ಪಾಟೀಲ್, ಕೇಂದ್ರ ಸಚಿವರಾದ ಕೆಎಚ್ ಮುನಿಯಪ್ಪ ಮತ್ತು ರೆಹಮಾನ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications