ಒಲ್ಲದ ಮನಸ್ಸಿನಿಂದಲೇ ಅಜೀಂ ದೋಸ್ತಿಗೆ ಕುಮಾರಣ್ಣ ಅಸ್ತು

ಚಾಮರಾಜಪೇಟೆಯ ಶಾಸಕ ಮತ್ತು ತಮಗೆ ಸಕಲವೂ ಆಗಿರುವ ಜಮೀರ್ ಅಹಮದ್ ಅವರ ಮಾತಿಗೆ ಹಿತ್ತಾಳೆಕಿವಿಯಾಗಿ, ಖಡಕ್ ಪೊಲೀಸ್ ಅಬ್ದುಲ್ ಅಜೀಂರನ್ನು ಪಕ್ಷದಿಂದ ದೂರವಿಟ್ಟಿದ್ದ ಕುಮಾರಸ್ವಾಮಿ ನಿನ್ನೆ ಗುರುವಾರ ಅಪ್ಪನ ಸಮ್ಮುಖದಲ್ಲಿ ಜೆಡಿಎಸ್‌ಗೆ ಮತ್ತೆ ಸ್ವೀಕರಿಸಿದ್ದಾರೆ. ಇದೊಂದು ರೀತಿ ಮನೆ ಮನೆಯ ಕಥೆಯಿದ್ದಂತೆ. ಆದರೂ ...
ಚುನಾವಣೇ ಕಾಲೇ ... ಖಡಕ್ ಪೊಲೀಸ್ ಅಧಿಕಾರಿ ಬಹುಜನ ಪ್ರಿಯರಾಗಿದ್ದ ಅಬ್ದುಲ್ ಅಜೀಂ ಜೆಡಿಎಸ್ ಸೇರಿ ವಿಧಾನಪರಿಷತ್ ಸದಸ್ಯರೂ ಆಗಿದ್ದವರು. ಆದರೆ ಅಜೀಂ ಪಕ್ಷದೊಳಕ್ಕೆ ನುಸುಳಿದ್ದು ತಮ್ಮ ಬುಡಕ್ಕೇ ನೀರು ತರಲಿದ್ದಾರೆ ಎಂಬುದುನ್ನು ಬಹುಬೇಗನೇ ಅರ್ಥ ಮಾಡಿಕೊಂಡಿದ್ದ ಜಮೀರ್ ಅಹಮದ್ ಸಾಹೇಬರು ಅಜೀಂರನ್ನು ಮೂಲೆಗುಂಪು ಮಾಡಿ, ಬಂದಷ್ಟೇ ವೇಗದಲ್ಲಿ ಪಕ್ಷದಿಂದ ದೂರವಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದರು. ಇದಕ್ಕೆ ಕುಮಾರಣ್ಣನ ಗೆಳೆತನ ಸಾಕಷ್ಟು ನೀರೆರೆದಿತ್ತು.
ಆದರೆ ಜೆಡಿಎಸ್ ಪಕ್ಷದ ಮುಕುಟವಿಲ್ಲದ ಮಹಾರಾಜ ಎಚ್ ಡಿ ದೇವೇಗೌಡರಿಗೆ ಪುತ್ರನ ರಾಜಕೀಯ ನಡೆ ಅರ್ಥವಾಗಲು ಹೆಚ್ಚು ಕಾಲ ಬೇಕಾಗಲಿಲ್ಲ. ಹಾಗೆಂದೇ ಅಜೀಂರನ್ನು ಅಪ್ಪಿಕೊಂಡು 'ಸದ್ಯಕ್ಕೆ ಸುಮ್ಮನಿರು. ಮುಂದೆ ನಿನಗೂ ಕಾಲ ಬರುತ್ತೆ. ಆಗ ಪಕ್ಷಕ್ಕೆ ಮತ್ತೆ ಬರುವಿಯಂತೆ' ಎಂದು ಮನೆಬಿಟ್ಟು ಹೋಗಿದ್ದ ಅಜೀಂಗೆ ಸಂದೇಶ ರವಾನಿಸಿದ್ದರು. ಹಾಗೆಂದೇ ಮನೆಯ ಹಿರಿಯನ ಮಾತಿಗೆ ಕಟ್ಟುಬಿದ್ದು ಅಜೀಂ ಸಹ ಬೇರೆ ಪಕ್ಷ ಸೇರದೆ ಕಾಲ ತಳ್ಳುತ್ತಿದ್ದರು.
ಆದರೆ ಈಗ ಚುನಾವಣೆ ಸಮೀಪಿಸಿರುವುದರಿಂದ ಜಮೀರ್ ಜತೆ ರಾಜಿ ಕಬೂಲಿ ಮಾಡಿಕೊಂಡ ಅಜೀಂ ಪಕ್ಷಕ್ಕೆ ರಿಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಯಾಮಾರಬಾರದೆಂದು ಬರುವಾಗಲೇ ತಮ್ಮ ಸ್ಥಾನಮಾನವನ್ನು ಖಾತ್ರಿ ಪಡಿಸಿಕೊಂಡೇ ಬಂದಿದ್ದಾರೆ. ಅವರನ್ನು ಬಿಗಿದಪ್ಪಿರುವ ದೊಡ್ಡಗೌಡ್ರು ಅಜೀಂ ಕೈಗೆ ಆಗಲೇ ಹೆಬ್ಬಾಳ ಕ್ಷೇತ್ರದ ಟಿಕೆಟ್ ನೀಡಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿದೆ.
'ಪಕ್ಷದಲ್ಲಿನ ನಾಯಕರು ಮುಂದಿನ ದಿನಗಳಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ, ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವತ್ತ ಗಮನ ಹರಿಸಬೇಕು. ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು 'ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು' ಮುಂದುವರಿಬೇಕು' ಎನ್ನುತ್ತಲೇ ಗೌಡರು ಮಗನ ಕಿವಿಹಿಂಡಿದ್ದಾರೆ.
ಅಬ್ದುಲ್ ಅಜೀಂಮ್ ಸಹ ಈ ಸಂದರ್ಭದಲ್ಲಿ ಮಾತನಾಡಿದ್ದಾರೆ: 'ಕೆಲ ನಾಯಕರೊಂದಿಗಿನ ಕೆಲ ಭಿನ್ನಾಭಿಪ್ರಾಯಗಳಿಂದಾಗಿ ಪಕ್ಷವನ್ನು ತೊರೆಯುವ ನಿರ್ಧಾರ ಕೈಗೊಳ್ಳಬೇಕಾಯಿತು. ಆದರೆ, ಪಕ್ಷದ ವರಿಷ್ಠ ದೇವೇಗೌಡರಿಗೆ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದುದ್ದರಿಂದ, ಈವರೆಗೆ ನನ್ನ ರಾಜೀನಾಮೆಯನ್ನು ಅಂಗೀಕರಿಸಲಿಲ್ಲ. ಪಕ್ಷಕ್ಕೆ ಮರಳುತ್ತಿರುವುದರಿಂದ ತವರು ಮನೆಗೆ ಹಿಂದಿರುಗುತ್ತಿರುವಷ್ಟು ಸಂತೋಷವಾಗಿದೆ' ಎಂದಿದ್ದಾರೆ.
ಈ ಪುನರ್ಮಿಲನಕ್ಕೆ ಶಾಸಕ ಬಿ ಜೆಡ್ ಜಮೀರ್ ಅಹ್ಮದ್ ಖಾನ್, ಇಕ್ಬಾಲ್ ಅನ್ಸಾರಿ, ಜಫರುಲ್ಲಾ ಖಾನ್, ಮಾಜಿ ಐಪಿಎಸ್ ಸುಭಾಷ್ ಭರಣಿ ಸೇರಿದಂತೆ ಇನ್ನಿತರರು ಸಾಕ್ಷಿಯಾಗಿದ್ದುದು ವಿಶೇಷವಾಗಿತ್ತು.












Click it and Unblock the Notifications