ಟೀಚರ್ ಟಾರ್ಚರ್ ಸಹಿಸದೆ ವಿದ್ಯಾರ್ಥಿ ಆತ್ಮಹತ್ಯೆ

ಜ್ಞಾನಭಾರತಿ ಇಂಗ್ಲೀಷ್ ಶಾಲೆಯಲ್ಲಿ ಹತ್ತನೇ ತರಗತಿ ವಿಶ್ವಾಸ್ ಕಳೆದ ವಾರ ನಡೆದ ವಿಶೇಷ ತರಗತಿಗೆ ಹಾಜರಾಗಿರಲಿಲ್ಲ. ಸೋಮವಾರ ಶಾಲೆಗೆ ಎಂದಿನಂತೆ ಹೋಗಿದ್ದಾನೆ.
ಕ್ಲಾಸ್ ಟೀಚರ್ ಹಾಗೂ ಮುಖ್ಯ ಶಿಕ್ಷಕಿ ನಂದಿನಿ ಅವರು ತಮ್ಮ ಪಿರೀಡ್ ನಲ್ಲಿ ಸ್ಪೆಷಲ್ ಕ್ಲಾಸ್ ಗೆ ತಪ್ಪಿಸಿಕೊಂಡವರನ್ನು ತರಗತಿಯಲ್ಲಿ ನಿಲ್ಲಿಸಿದ್ದಾರೆ. ವಿಶ್ವಾಸ್ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಕ್ಕೆ ಹಾಕಲಾಗಿದೆ.
ಸಹಪಾಠಿಗಳ ಎದುರು ಹೀನಾಯವಾಗಿ ಬೈದು ತುಚ್ಛವಾಗಿ ಕಂಡು ಹೊರಕ್ಕೆ ಕಳಿಸಲಾಗಿದೆ. ಕಣ್ಣೀರು ಹಾಕುತ್ತಾ ಹೊರಕ್ಕೆ ಹೋದ ವಿದ್ಯಾರ್ಥಿಗಳು, ತಮ್ಮ ಪೋಷಕರ ಬಳಿ ಗೋಳು ತೋಡಿಕೊಂಡಿದ್ದಾರೆ.
ಪೋಷಕರು ಶಾಲೆಗೆ ಬಂದು ಮನವಿ ಮಾಡಿಕೊಂಡಿದ್ದಾರೆ. ಅದರೆ, ಶಿಕ್ಷಕಿ ಮನ ಕರಗಿಲ್ಲ. ಮನೆಗೆ ಬಂದ ಪೋಷಕರು ಕೂಡಾ ವಿಶ್ವಾಸ್ ಗೆ ಸ್ವಲ್ಪ ಬೈದಿದ್ದಾರೆ. ವಿಶ್ವಾಸ್ ಗೆ ಈ ನಡುವೆ ತಲೆನೋವು ಆಗಾಗ ಕಾಣಿಸಿಕೊಳ್ಳುತ್ತಿರುತ್ತದೆ.
ಕಳೆದ ರಾತ್ರಿ ಕೂಡಾ ಇದೇ ನೆಪ ವೊಡ್ಡಿ ಬೇಗ ಮಲಗಿಕೊಂಡಿದ್ದಾನೆ. ಆದರೆ, ಬೆಳಗ್ಗೆ ನೋಡಿದರೆ ಆತನ ಶವ ಫ್ಯಾನಿಗೆ ನೇಣು ಹಾಕಿದ ಸ್ಥಿತಿಯಲ್ಲಿ ಕಾಣಿಸಿದೆ.
ಪೋಷಕರು ಹಾಗೂ ಸ್ಥಳೀಯ ಕೆಲ ಸಂಘಟನೆಗಳು ಶಾಲೆಗೆ ತೆರಳಿ ಗಲಾಟೆ ನಡೆಸಿದ್ದಾರೆ. ಸಂಧಾನ ಮಾತುಕತೆ ನಡೆಸಿ ವಿಫಲವಾಗಿದೆ. ನಂತರ ಪೊಲೀಸರ ಮೊರೆ ಹೊಕ್ಕಿದ್ದಾರೆ.
ಆಗಾಗ ರಜೆ ಹಾಕಿದರೆ ಓದಿನಲ್ಲಿ ಹಿಂದೆ ಬೀಳುತ್ತಿಯ ಎಂದು ಹೇಳಿದ್ದು ನಿಜ. ನಾವು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿಲ್ಲ. ಹೀನಾಯವಾಗಿ ಬೈದಿಲ್ಲ. ಕಿರುಕುಳ ನೀಡಿಲ್ಲ ಎಂದು ಶಾಲಾ ಮಂಡಳಿ ಹೇಳಿಕೆ ನೀಡಿದೆ.
ವಿಶ್ವಾಸ್ ಗೆ ತಲೆ ನೋವು ಇದ್ದದ್ದು ನಿಜ ಆದರೆ, ಅದೇ ಆತನ ಸಾವಿಗೆ ಕಾರಣ ಎಂಬುದನ್ನು ನಂಬಲು ಸಾಧ್ಯವಿಲ್ಲ. ಶಾಲೆಯಲ್ಲಿ ಶಿಕ್ಷೆ ನೀಡುತ್ತಿದ್ದರು ಎಂದು ಸ್ನೇಹಿತರು ಹೇಳಿದ್ದಾರೆ.
ಎಲ್ಲರ ಹೇಳಿಕೆ ಪಡೆದ ಪೊಲೀಸರು ಶಿಕ್ಷಕಿ ನಂದಿನಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಪೋಷಕರು ತಮ್ಮ ಹೇಳಿಕೆ ಬದಲಾಯಿಸಿದ ಕಾರಣ ಬಂಧನದಿಂದ ಮುಕ್ತರಾದರು ಎಂದು ತಿಳಿದು ಬಂದಿದೆ.
ಶಾಲಾ ಶಿಕ್ಷಕಿಯ ಕಿರುಕುಳಕ್ಕೆ ಬೇಸತ್ತು ತರಗತಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿ ಅಜಯ್ ಭಾನುವಾರ (ಡಿ.3) ಮುಂಜಾನೆ ದುರಂತ ಸಾವನ್ನಪ್ಪಿದ ಘಟನೆ ಬಿಜಾಪುರದಲ್ಲಿ ನಡೆದಿತ್ತು.
ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಆಕ್ರೋಶಕ್ಕೆ 10 ವರ್ಷ ವಯಸ್ಸಿನ ವಿದ್ಯಾರ್ಥಿ ಬಲಿಯಾದ ಘಟನೆ ಭೋಪಾಲ್ ನಲ್ಲಿ ವರದಿಯಾಗಿತ್ತು.
ಉಪನ್ಯಾಸಕರು ಬೈದ ಕಾರಣ ಆಕೆ ಮನನೊಂದ ಪಿಯು ವಿದ್ಯಾರ್ಥಿಯೊಬ್ಬಳು ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು.











Click it and Unblock the Notifications