ಹೊಸ ವರ್ಷಕ್ಕೆ ಹೊಸ ಚೆಕ್ ಬುಕ್ ತಪ್ಪದೆ ಇಸ್ಕೊಳ್ಳಿ
ನವದೆಹಲಿ, ಡಿ.13: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ವರ್ಷಕ್ಕೆ ಹೊಸ ರೂಪದ ಚೆಕ್ ಮಾತ್ರ ಬಳಸಬೇಕು ಎಂದು ಆದೇಶ ಹೊರಡಿಸಿದೆ. ಚೆಕ್ ಟ್ರಂಕೇಷನ್ ವ್ಯವಸ್ಥೆ(ಸಿಟಿಎಸ್) ಜನವರಿ 1,2013ರಿಂದ ಜಾರಿಗೆ ಬರಲಿದೆ. ಹೀಗಾಗಿ, ಗ್ರಾಹಕರು ಹಳೆ ಚೆಕ್ ಪುಸ್ತಕ ಬದಲಾಯಿಸಿಕೊಳ್ಳಬೇಕಾಗಿದೆ.
ಸಿಟಿಎಸ್ ನಿಂದಾಗಿ ಚೆಕ್ ಕ್ಲಿಯರಿಂಗ್ ಪ್ರಕ್ರಿಯೆ ವೇಗಗೊಳ್ಳಲಿದೆ ಹಾಗೂ ಭದ್ರತೆಯೂ ಹೆಚ್ಚಾಗಲಿದೆ. ಸದ್ಯ ಚಾಲ್ತಿಯಲ್ಲಿರುವ ಚೆಕ್ ಕ್ಲಿಯರಿಂಗ್ ಪ್ರಕ್ರಿಯೆಯಲ್ಲಿರುವ ಹಲವು ದೋಷ, ಮೋಸಗಳನ್ನು ಸಿಟಿಎಸ್ ಕಿತ್ತೊಗೆಯಲಿದೆ ಎಂದು ಆರ್ ಬಿಐ ಹೇಳಿದೆ.
ಎಲ್ಲ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಡಿಸೆಂಬರ್ ತಿಂಗಳ ಅಂತ್ಯದೊಳಗೆ ಹಳೆ ಚೆಕ್ ಮರಳಿಸುವಂತೆ ಸೂಚಿಸಿವೆ.

ಏಕ ರೂಪತೆ ಅಗತ್ಯ: ಇದುವರೆವಿಗೂ ಬ್ಯಾಂಕ್ ಗಳು ಚೆಕ್ ನಲ್ಲಿ ತಮ್ಮದೇ ಶೈಲಿಯನ್ನು ಅಳವಡಿಸಿಕೊಂಡಿದ್ದವು. ಬ್ಯಾಂಕಿನ ಲೋಗೋ ನಮೂದಿಸಲು ನಿಗದಿತ ಸ್ಥಳ ಇರಲಿಲ್ಲ. ಜನವರಿ ನಂತರ ಏಕ ರೂಪದ ಚೆಕ್ ವ್ಯವಸ್ಥೆ ಜಾರಿಗೆ ಬರಲಿದ್ದು, ಎಲ್ಲಾ ಬ್ಯಾಂಕಿನ ಚೆಕ್ ಗಳು ಒಂದೇ ಉದ್ದ ಗಾತ್ರ ಅಗಲ ಹಾಗೂ ಗುಣಲಕ್ಷಣಗಳನ್ನು ಹೊಂದಿರುತ್ತದೆ ಎಂದು ಆರ್ ಬಿಐ ಹೇಳಿದೆ.
ಕರೆನ್ಸಿ ನೋಟಿನಂತೆ ಚೆಕ್ ಕೂಡಾ ಗುಪ್ತ ಚೆನ್ಹೆಗಳನ್ನು ಹೊಂದಿರುತ್ತದೆ. ಸಿಟಿಎಸ್ ಜಾರಿಗೆ ಬಂದ ಮೇಲೆ ಚೆಕ್ ಬದಲಿಗೆ ಎಲೆಕ್ಟ್ರಾನಿಕ್ ಇಮೇಜ್ ಮೂಲಕ ವ್ಯವಹಾರ ನಡೆಯುತ್ತದೆ. ಚೆಕ್ ನ ಎಡಬದಿಯ ಕೆಳಗೆ ಅಕೌಂಟ್ ನಂಬರ್ ನಮೂದಿಸಲಾಗುತ್ತದೆ.
ಸಿಟಿಎಸ್ 2010 ಎಂದು ಅದೇ ಬದಿಯಲ್ಲಿ ಇರುತ್ತದೆ. ಮೊತ್ತ ಬರೆದಿರುವ ಬಾಕ್ಸ್ ನಲ್ಲಿ ರುಪಾಯಿ ಚಿನ್ಹೆ ಇರುತ್ತದೆ. ಗ್ರಾಹಕರ ಸಹಿ ಜಾಗವೂ ಪ್ರತ್ಯೇಕವಾಗಿ ಎದ್ದು ಕಾಣಲಿದೆ.
ವಾಟರ್ ಮಾರ್ಕ್ ನಲ್ಲಿ ಬ್ಯಾಂಕ್ ಹೆಸರು ಇರುತ್ತದೆ. ಚೆಕ್ ಗಾತ್ರ 8X3.667 ಇಂಚು ಇರುತ್ತದೆ. ಯಾವುದೇ ಪರಿವರ್ತನೆ, ತಿದ್ದುಪಡಿ ಮಾಡಿದರೆ ಚೆಕ್ ಅನೂರ್ಜಿತಗೊಳ್ಳಲಿದೆ.
ಯಾವುದೇ ಬ್ಯಾಂಕಿನ ಚೆಕ್ ಆದರೂ ಒಂದೇ ದಿನದಲ್ಲಿ ಕ್ಲಿಯರ್ ಆಗುತ್ತದೆ. ಚೆಕ್ ದುರ್ಬಳಕೆ ತಪ್ಪುತ್ತದೆ. ಚೆಕ್ ಕ್ಲಿಯರಿಂಗ್ ಸಮಯ ಉಳಿತಾಯದಿಂದ ಗ್ರಾಹಕರಿಗೆ ಹೆಚ್ಚಿನ ಲಾಭ ಸಾಧ್ಯತೆಯಿದೆ ಎಂದು ಆರ್ ಬಿಐ ಹೇಳಿದೆ.
ಪೋಸ್ಟ್ ಡೇಟೆಡ್ EMI ಚೆಕ್ ಗಳಿಗೂ ಅನ್ವಯವಾಗಲಿದೆ. ಸಿಟಿಎಸ್ 2010 ಗುಣಮಟ್ಟ ಹೊಂದಿರದ ಹಳೆ ಚೆಕ್ ಗಳನ್ನು ಡಿ.31, 2012ರೊಳಗೆ ಬದಲಾಯಿಸಿಕೊಳ್ಳತಕ್ಕದ್ದು, ಸಿಟಿಎಸ್ 2010 ಇರದ ಚೆಕ್ ಗಳಿದ್ದರೆ ಜನವರಿ 1, 2013ರ ನಂತರ ಯಾವ ಬ್ಯಾಂಕ್ ಕೂಡಾ ಅದನ್ನು ಸ್ವೀಕರಿಸುವುದಿಲ್ಲ.
ವೆಬ್ ಸೈಟ್, ಎಸ್ ಎಂಎಸ್, ಪತ್ರ, ಇಮೇಲ್, ಜಾಹೀರಾತು ಹೀಗೆ ವಿವಿಧ ರೀತಿಯಲ್ಲಿ ಗ್ರಾಹಕರಿಗೆ ಸಿಟಿಎಸ್ ಬಗ್ಗೆ ಬ್ಯಾಂಕ್ ಗಳು ಮಾಹಿತಿ ನೀಡುತ್ತಿದೆ. ಗ್ರಾಹಕರು ಎಚ್ಚೆತ್ತುಕೊಂಡು ಬದಲಾಯಿಸಿಕೊಂಡರೆ ಬಚಾವ್.












Click it and Unblock the Notifications