ಥಾಯ್ಲೆಂಡ್ ಕಾಂಡೋಮ್ ಮ್ಯೂಸಿಯಂ:ವಿಶ್ವದಲ್ಲೇ ಚೊಚ್ಚಲು

ಥಾಯ್ಲೆಂಡಿನ ಈ ಕಾಂಡೋಮ್ ಮ್ಯೂಸಿಯಂ ಇಡೀ ವಿಶ್ವದಲ್ಲೇ ಚೊಚ್ಚಲು. ಥಾಯ್ಲೆಂಡಿನ ನಾಂತಬೂರಿ ನಗರದಲ್ಲಿರುವ ಈ ಸಂಗ್ರಹಾಲಯದತ್ತ ಪ್ರವಾಸಿಗರು ಮುಗಿಬಿದ್ದಿದ್ದಾರೆ. ಆದರೆ ಇದೇನಪ್ಪಾ ಥಾಯ್ಲೆಂಡಿನಲ್ಲಿ ಕಾಂಡೋಮ್ ಮ್ಯೂಸಿಯಂ? ಎಂದು ಮೂಗುಮುರಿಯುವ ಹಾಗಿಲ್ಲ. ಏಕೆಂದರೆ ಜಗತ್ತಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಾಂಡೋಮ್ ತಯಾರಿಸುವ ರಾಷ್ಟ್ರವೆಂದರೆ ಅದು ಥಾಯ್ಲೆಂಡ್ ಮಾತ್ರ.
ಕಾಲಕ್ಕೆ ತಕ್ಕಂತೆ ಬಳಕೆಯಾದ ಅಂದರೆ ಇತಿಹಾಸದ ಆಯಾ ಕಾಲಘಟ್ಟಗಳಲ್ಲಿ ಬಳಕೆಗೆ ಬಂದ ಕಾಂಡೋಮುಗಳನ್ನು ಒಪ್ಪ ಓರಣವಾಗಿ ತೋರಣವಾಗಿ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಅಂಗಡಿಗಳಲ್ಲಿ ನಾನಾ ಗಾತ್ರ, ಬಣ್ಣ, ವಾಸನೆಗಳಲ್ಲಿ ಲಭ್ಯವಾಗುವ ಕಾಂಡೋಮ್ ಇಲ್ಲಿ ಪ್ರದರ್ಶನಕ್ಕೆ ಇದೆ.
ಇದಲ್ಲದೆ ಇನ್ನೂ ಅನೇಕಾನೇಕ ವಸ್ತುಗಳೂ ಇಲ್ಲಿ ಬಹಿರಂಗವಾಗಿವೆ. ಅವುಗಳಲ್ಲಿ ಕಾಂಡೋಮ್ ಗಳಿಗೆ ಗಾಳಿಯೂದುವ ಸಾಧನ (ಪೆನ್ನಿಸ್ ಪಂಪ್) ಕಣ್ಣಿಗೆ ರಾಚುವಂತೆ ಎದ್ದುಕಾಣುತ್ತದೆ. ಇನ್ನು ಮ್ಯೂಸಿಯಂನ ಗೋಡೆಗಳನ್ನು ಈ ಹಿಂದೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಕಾಂಡೋಮ್ ಕುರಿತಾದ ಜಾಹೀರಾತುಗಳೂ ಇವೆ.
ಇನ್ನು, ಕಾಂಡೋಮಿನ ತಾಳಿಕೆ/ಬಾಳಿಕೆಯನ್ನು ಪರೀಕ್ಷಿಸುವ ಸಾಧನವನ್ನೂ ಇಲ್ಲಿಡಲಾಗಿದೆ. ಈ ಸಂಗ್ರಹಾಲಯ ಕಾಂಡೋಮ್ ಗಷ್ಟೇ ಮೀಸಲಾಗುವುದಿಲ್ಲ. ಸೆಕ್ಸ್, ಸಂಭೋಗ, ಪುರುಷ, ಮಹಿಳೆಗೆ ಸಂಬಂಧಪಟ್ಟಂತೆ ವಿಷಯ/ವಸ್ತುಗಳೂ ಇಲ್ಲಿ ಜಾಗವನ್ನಾಕ್ರಮಿಸಿಕೊಂಡಿವೆ.
ಅದ್ಸರಿ ಗುಪ್ತವಾಗಿ ಬಳಸುವ ಸಾಧನ/ ಸಮಾಚಾರವನ್ನು ಹೀಗೆ ಮ್ಯೂಸಿಯಂನಲ್ಲಿ ಸಾರ್ವಜನಿಕವಾಗಿ ತೆರೆದಿಡುವ ಜರೂರತ್ತಾದರೂ ಏನು ಎಂದು ಕೇಳಿ ನೋಡಿ ಥಟ್ಟಂತ ಉತ್ತರ ಬರುತ್ತದೆ:
ಜನರಿಗೆ ಕಾಂಡೋಮಿನ ಬಗ್ಗೆ ಅವೈಜ್ಞಾನಿಕ, ತಪ್ಪು ತಿಳಿವಳಿಕೆ ಇದೆ. ಇಂದಿನ ಏಡ್ಸ್ ಯುಗದಲ್ಲಿ ಸುರಕ್ಷಿತ ಸಂಭೋಗದ ಬಗ್ಗೆ ಜಾಗೃತ್ತಿ ಮೂಡಿಸುವ ಜರೂರತ್ತು ಬಹಳಷ್ಟಿದೆ. ಕಾಂಡೋಮ್ ಬಳಕೆಗೆ ಜನರನ್ನು ಉತ್ತೇಜಿಸುವ ಅಗತ್ಯ ಬಹಳಷ್ಟಿದೆ. ಹಾಗಾಗಿ ಈ ಸಂಗ್ರಹಲಾಯ. ಜನ ಯಾವುದೇ ಮುಜುಗುರ, ಮಡಿವಂತಿಕೆಯಿಲ್ಲದೆ ಕಾಂಡೋಮ್ ನೋಡಿಕೊಂಡು ಹೋಗುತ್ತಿದ್ದಾರೆ ಎಂದು ಮ್ಯೂಸಿಯಂ ಅಧಿಕಾರಿಗಳು ಉತ್ಸಾಹದಿಂದ ಹೇಳುತ್ತಾರೆ.












Click it and Unblock the Notifications