ಜಯನಗರದಲ್ಲಿ ಸಾವಯವ ತ್ಯಾಜ್ಯ ಘಟಕ ಭೀತಿ

ಜಯನಗರ ಸಾರ್ವಜನಿಕ ಈಜುಕೊಳ ಬಳಿ ಸಾವಯವ ತ್ಯಾಜ್ಯ ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಿತ್ತು. ಘಟಕ ಸ್ಥಾಪನೆ ವಿರೋಧಿಸಿ ಜಯನಗರ 1 ಹಾಗೂ 3ನೇ ಬ್ಲಾಕಿನ ನಾಗರೀಕರು ಪ್ರತಿಭಟನೆ ನಡೆಸಿದರು.
ಇಲ್ಲಿ ಘಟಕ ಸ್ಥಾಪಿಸುವುದರಿಂದ ಅಂತರ್ಜಲ ಕಲುಷಿತಗೊಳ್ಳುತ್ತದೆ. ಬ್ಯಾಕ್ಟೀರಿಯಾದಿಂದ ಹರಡುವ ರೋಗಗಳು ಹೆಚ್ಚುತ್ತದೆ. ಗ್ಯಾಸ್ಟ್ರೀಕ್, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಅಧಿಕವಾಗಲಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ನಾಗರೀಕ ಸಮಿತಿ ಅಧ್ಯಕ್ಷ ಜಿ ರಾಜಕುಮಾರ್ ಶ್ರೀವಾಸ್ತಾವ್ ಹೇಳಿದರು.
ಕರ್ನಾಟಕ ಮುನ್ಸಿಪಾಲ್ ಕಾರ್ಪೋರೇಟ್ ಕಾಯಿದೆ ಪ್ರಕಾರ ಇಲ್ಲಿ ಘಟಕ ಪರಿವರ್ತಕ ಸ್ಥಾಪನೆ ಮಾಡುವುದು ಕಾನೂನು ಉಲ್ಲಂಘನೆಯಾಗುತ್ತದೆ. ಅದರಲ್ಲೂ ಚರಂಡಿ ಕಾಲುವೆ ಮೇಲೆ ಘಟಕ ಪರಿವರ್ತಕ ಇರುವುದು ತಪ್ಪು ಎಂದು ನಾಗರೀಕರ ಸಮಿತಿ ಸದಸ್ಯರು ಹೇಳಿದ್ದಾರೆ.
ಸುಮಾರು 125 ಜನ ಸಹಿವುಳ್ಳ ಮನವಿ ಪತ್ರವನ್ನು ಬೆಂಗಳೂರಿನ ಮೇಯರ್ ವೆಂಕಟೇಶ್ ಮೂರ್ತಿ, ದಕ್ಷಿಣ ವಿಭಾಗದ ಆಯುಕ್ತ, ಮುಖ್ಯ ಇಂಜಿನಿಯರ್, ಹೆಚ್ಚುವರಿ ಆಯುಕ್ತ(ದಕ್ಷಿಣ), ಕಾರ್ಯಕಾರಿ ಇಂಜಿನಿಯರ್ ಹಾಗೂ ಸ್ಥಳೀಯ ಶಾಸಕ ಬಿಎನ್ ವಿಜಯ್ ಕುಮಾರ್ ಅವರಿಗೆ ಸಲ್ಲಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಅಯುಕ್ತ(ದಕ್ಷಿಣ) ಕೆವಿ ತ್ರಿಲೋಕ್ ಚಂದ್ರ, "ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಘಟಕ ಸ್ಥಾಪನೆ ಬಗ್ಗೆ ಕಾನೂನು ತಜ್ಞರ ಸಲಹೆ ಕೇಳಿದೆ. ಅವರ ಸಲಹೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸಾವಯವ ತ್ಯಾಜ್ಯ ತೊಂದರೆ: ಸಾವಯವ ತ್ಯಾಜ್ಯ ಘಟಕ ಪರಿವರ್ತಕ ಸ್ಥಾಪನೆಯಿಂದ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಬಹುದಾದರೂ ಸೂಕ್ತವಾಗಿ ಪ್ರಕ್ರಿಯೆ ನಡೆಯದಿದ್ದರೆ, ಸುತ್ತಮುತ್ತಲಿನ ಪ್ರದೇಶದ ಪರಿಸರ ಮಾಲಿನ್ಯಗೊಳ್ಳಲಿದೆ.
ಸಾವಯಮ ತ್ಯಾಜ್ಯ ಹಾಗೆ ಕೊಳೆಯಲು ಬಿಟ್ಟರೆ, ಸೊಳ್ಳೆ, ನೊಣಗಳ ಕಾಟ ಹೆಚ್ಚಳವಾಗಬಹುದು. ಚರ್ಮ ಸಂಬಂಧಿತ ಕಾಯಿಲೆಗಳು ಹೆಚ್ಚಾಗುವ ಸಂಭವವಿದೆ. ಬೆಂಗಳೂರಿನಲ್ಲಿ ಈಗಾಗಲೇ ಬಹುಪಾಲು ಜನ ಶ್ವಾಸಕೋಶ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವುದರಿಂದ ಜನದಟ್ಟನೆ ಇರುವ ಪ್ರದೇಶದಲ್ಲಿ ಈ ರೀತಿ ಘಟಕ ಸ್ಥಾಪನೆ ಇನ್ನಷ್ಟು ಹಾನಿ ಉಂಟು ಮಾಡಬಹುದು.












Click it and Unblock the Notifications