ಸೋನಿಯಾ ಗಾಂಧಿ ಜನ್ಮದಿನವೇ ಬಿಎಸ್‌ವೈ KJP ಅಸ್ತಿತ್ವಕ್ಕೆ
ಶಿವಮೊಗ್ಗ, ನ.24: ಅದೇನು ಕಾಕತಾಳೀಯವೋ ಅಥವಾ ಯಡಿಯೂರಪ್ಪನವರ ಮುತ್ಸದ್ದಿ ರಾಜಕೀಯ ಲೆಕ್ಕಾಚಾರವೋ ಗೊತ್ತಾಗುತ್ತಿಲ್ಲ. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ (67ನೇ) ಜನ್ಮದಿನವಾದ ಡಿಸೆಂಬರ್ 9ರಂದೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಮಹತ್ವಾಕಾಂಕ್ಷಿ ಕರ್ನಾಟಕ ಜನತಾ ಪಕ್ಷವನ್ನು (ಕೆಜೆಪಿ) ಅಧಿಕೃತವಾಗಿ ಅಸ್ತಿತ್ವಕ್ಕೆ ತರುತ್ತಿದ್ದಾರೆ.
ಅಂದಹಾಗೆ CP (ಕಾಂಗ್ರೆಸ್ ಅಧ್ಯಕ್ಷೆ) ಸೋನಿಯಾ ಗಾಂಧಿ ಅವರು 1946 ರ ಡಿ. 9ರಂದು ಇಟಲಿಯ ವೆನೆಟೋ ಪಟ್ಟಣದಿಂದ 30 ಕಿ.ಮೀ. ದೂರದಲ್ಲಿರುವ ಲೂಸಿಯಾನಾ ಎಂಬ ಚಿಕ್ಕ ಗ್ರಾಮದ ರೋಮನ್ ಕ್ಯಾಥೊಲಿಕ್ ಕುಟುಂಬದಲ್ಲಿ ಜನಿಸಿದರು. ಅವರು ಜನಿಸಿದ್ದು ಇದೇ ಮನೆಯಲ್ಲಿ (ಕೆಳಗಿನ ಚಿತ್ರ ನೋಡಿ). ಸೋನಿಯಾರ ಮೂಲ ಹೆಸರು ರಷ್ಯಾದಲ್ಲಿ Antonia Edvige Albina Maino.

ಇಟಲಿಯಿಂದ ವಾಪಸ್ ಶಿವಮೊಗ್ಗಕ್ಕೆ ಬಂದರೆ... ಶಿವಮೊಗ್ಗದ ರಾಜಕೀಯ ಧಣಿ ಯಡಿಯೂರಪ್ಪನವರು (ಜನನ 1943 ಫೆ. 27) political compulsionsಗಿಂತ ಹೆಚ್ಚಾಗಿ ಅವರದೇ ಆದ ಕಾರಣಗಳಿಂದಾಗಿ ಕಾಂಗ್ರೆಸ್ ಪಕ್ಷದ ಹೊಸ್ತಿಲಲ್ಲಿ ನಿಂತಿರುವುದು ರಾಜ್ಯ ಮತದಾರನಿಗೆ ಸ್ಪಷ್ಟವಾಗಿ ಕಾಣುತ್ತಿದೆ. ಹಾಗಾಗಿ ಕಾಂಗ್ರೆಸ್ ಅಧಿನಾಯಕಿಯನ್ನು ಸಂತುಷ್ಟಗೊಳಿಸಲು ಅವರ ಹುಟ್ಟುಹಬ್ಬದಂದೇ ಕರ್ನಾಟಕ ಜನತಾ ಪಕ್ಷ ಸ್ಥಾಪನೆಯನ್ನು ಹಾವೇರಿಯಲ್ಲಿ ಅಧಿಕೃತವಾಗಿ ಘೋಷಿಸುತ್ತಿದ್ದಾರಾ ಎಂಬ ಕುತೂಹಲ ಮೂಡಿದೆ.
ಈ ಮಧ್ಯೆ, ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರು 'ಸೋನಿಯಾಜೀ ಜನ್ಮದಿನವಾದ ಡಿ. 9ರಂದು ಯಡಿಯೂರಪ್ಪನವರು ಕೆಜೆಪಿ ಸ್ಥಾಪನೆ ಸಂಬಂಧ ಅಧಿಕೃತ ಘೋಷಣೆ ಮಾಡುತ್ತಾರೆ ಎಂದು ಕೇಳಿದ್ದೇನೆ. ಆದರೆ, ಇದಕ್ಕೆ ಹೊಸ ಅರ್ಥ ಕಲ್ಪಿಸಬೇಕಿಲ್ಲ. ಕಾಂಗ್ರೆಸ್‌ಗೂ, ಕೆಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿಯೇ ಸ್ಪರ್ಧಿಸಲಿದೆ' ಎಂದು ಶಿವಮೊಗ್ಗದಲ್ಲಿ ನಿನ್ನೆ ಸ್ಪಷ್ಟಪಡಿಸಿದ್ದಾರೆ.
ಆದರೂ 'ಯಾವ ಹುತ್ತದಲ್ಲಿ ಯಾವ ಹಾವಿದೆಯೋ? ರಾಜಕಾರಣಿಯ ಮನದಲ್ಲಿ ಏನಿದೆಯೋ, ಯಃಕಶ್ಚಿತ್ ಮತದಾರನಿಗೆ ಎಲ್ಲಿ ಅರ್ಥವಾಗಬೇಕು?'. ಕಾಲವೇ ಎಲ್ಲಾ ಹೇಳಬೇಕು.












Click it and Unblock the Notifications