ಕೋಲಾರದಲ್ಲಿ ನಾಲ್ಕು ಕಡೆ ಲೋಕಾಯುಕ್ತ ದಾಳಿ

ಅವ್ಯವಹಾರ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ನೌಕರ ಮನೆ ಮತ್ತು ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ದಾಳಿ ವೇಳೆ ಅಪಾರ ಪ್ರಮಾಣದ ನಗದು ಹಾಗೂ ಆಸ್ತಿ ಪತ್ರಗಳು ಪತ್ತೆಯಾಗಿದೆ.
ಕೋಲಾರ ಜಿಲ್ಲೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಫಾರುಖ್ ಸುಲ್ತಾನ, ಡಿ ಗ್ರೂಪ್ ನೌಕರ ಮಂಜುನಾಥ್, ಹಾಸ್ಟೆಲ್ ವಾರ್ಡೆನ್ ಅಜೀಮ್, ಖಜಾನೆ ನೌಕರ ವೆಂಕಟೇಶ್ ಅವರ ನಿವಾಸ ಮತ್ತು ಕಚೇರಿ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ.
ಲೋಕಾಯುಕ್ತ ಡಿವೈಎಸ್ ಪಿ ನಾಗರಾಜ್ ನೇತೃತ್ವದಲ್ಲಿ ನಡೆಸಲಾದ ದಾಳಿಯಲ್ಲಿ ಕೋಟ್ಯಂತರ ರು ಮೌಲ್ಯದ ಆಸ್ತಿ, ನಗದು, ಚಿನ್ನಾಭರಣ, ಬೇನಾಮಿ ಬ್ಯಾಂಕ್ ಖಾತೆ, ಭೂ ದಾಖಲೆಗಳು ಕಂಡು ಬಂದಿದೆ.
ಆರೋಪಿಗಳ ವಿವರ:
* ಫಾರೂಖಿ ಸುಲ್ತಾನ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ(ಕೋಲಾರ) ಆರ್ ಟಿ ನಗರ ನಿವಾಸದ ಮೇಲೆ ದಾಳಿ.
* ವೆಂಕಟೇಶ್ ಎನ್, ಎರಡನೇ ದರ್ಜೆ ಸಹಾಯಕ ಗುಮಾಸ್ತ(SDC), ಜಿಲ್ಲಾ ಖಜಾನೆ ಕಚೇರಿ, ಕೋಲಾರ, ಕುರುಬರ ಪೇಟೆ ಆಂಜನೇಯ ದೇಗುಲದ ಬಳಿ ಇರುವ ನಿವಾಸ.
* ಅಜೀಮ್, ನಚಿಕೇತ ವಿದ್ಯಾರ್ಥಿ ನಿಲಯ, ಕೋಲಾರ, ಕೋಟೆ ಪ್ರದೇಶದಲ್ಲಿರುವ ನಿವಾಸ.
* ಮಂಜುನಾಥ್, ಡಿ ಗ್ರೂಪ್ ನೌಕರ ಸಮಾಜ ಕಲ್ಯಾಣ ಇಲಾಖೆ, ರಾಮದೇವ ಗುಡಿಬೀದಿಯಲ್ಲಿರುವ ನಿವಾಸದ ಮೇಲೆ ದಾಳಿ
* ವೇಣುಗೋಪಾಲ ರೆಡ್ಡಿ ಎಚ್.ಎನ್, ವೇದ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಲಿ. ಚಿಂತಾಮಣಿ
ಎಲ್ಲಾ ಆರೋಪಿಗಳ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ಹಾಗೂ ವಿವಿಧ ಐಪಿಸಿ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದರು.
ಲೋಕಾಯುಕ್ತ ಎಸ್ಪಿ ವೆಂಕಟೇಶ್, ಡಿವೈಎಸ್ ಪಿ ನಾಗರಾಜ್, ಲೋಕಾಯುಕ್ತ ಇನ್ಸ್ ಪೆಕ್ಟರ್ ಗಳಾದ ಗೌತಮ್, ಪುಟ್ಟಸ್ವಾಮಿ ನೇತೃತ್ವದ ತಂಡ, ಚಿಕ್ಕಬಳ್ಳಾಪುರ ಲೋಕಾಯುಕ್ತ ಇನ್ಸ್ ಪೆಕ್ಟರ್ ಕೃಷ್ಣ ತಂಡ, ಇನ್ಸ್ ಪೆಕ್ಟರ್ ಲೋಕೇಶ್ ಅವರ ತಂಡ ಯಶಸ್ವಿ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಹಚ್ಚಿದರು.












Click it and Unblock the Notifications