ಹೊಸ ಅಡುಗೆ ಅನಿಲ ಸಂಪರ್ಕ ಇಲ್ಲ

ಒಂದಕ್ಕಿಂತ ಹೆಚ್ಚು ಎಲ್ಪಿಜಿ ಸಂಪರ್ಕ ಹೊಂದಿದ್ದವರನ್ನು ಪತ್ತೆ ಹಚ್ಚುವ ಕಾರ್ಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಮುಗಿಯದಿರುವ ಹಿನ್ನಲೆಯಲ್ಲಿ ತೈಲ ಕಂಪೆನಿಗಳು ಈ ಮಹತ್ವದ ನಿರ್ಧಾರಕ್ಕೆ ಬಂದಿದೆ.
ಬೇನಾಮಿ ಹೆಸರಿನಲ್ಲಿ ಮತ್ತು ಹೆಚ್ಚುವರಿ ಎಲ್ಪಿಜಿ ಸಂಪರ್ಕ ಹೊಂದಿರುವ ಗ್ರಾಹಕರನ್ನು ಪತ್ತೆ ಹಚ್ಚುವ ಸಲುವಾಗಿ ಕಳೆದ ಸೆಪ್ಟಂಬರ್ ತಿಂಗಳಿನಿಂದಲೇ ಹೊಸ ಕನೆಕ್ಷನ್ ನೀಡುವುದನ್ನು ತೈಲ ಕಂಪೆನಿಗಳು ತಾತ್ಕಾಲಿಕವಾಗಿ ನಿಲ್ಲಿಸಿದ್ದವು.
ಮೇಘಾಲಯ, ಸಿಕ್ಕಿಂ, ನಾಗಾಲ್ಯಾಂಡ್ , ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾತ್ರ ಹೊಸ ಸಂಪರ್ಕ ನೀಡಲು ತೈಲ ಕಂಪೆನಿಗಳು ಮುಂದೆ ಬಂದಿರುವ ಹಿನ್ನಲೆಯಲ್ಲಿ ಹೊಸ ಸಂಪರ್ಕ ಪಡೆಯಲು ಉತ್ಸುಕರಾಗಿದ್ದ ರಾಜ್ಯದ ಜನತೆಗೆ ನಿರಾಶೆಯಾಗಿದೆ.
ಅಕ್ರಮ ಎಲ್ಪಿಜಿ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ತೈಲ ಕಂಪೆನಿಗಳು 'ನಿಮ್ಮ ಗ್ರಾಹಕರನ್ನು ಅರಿಯಿರಿ' ಎನ್ನುವ ಆಂದೋಲನ ಜಾರಿ ಮಾಡಿದ್ದವು. ಇದರ ಅನ್ವಯ ಒಂದಕ್ಕಿಂತ ಹೆಚ್ಚು ಎಲ್ಪಿಜಿ ಸಂಪರ್ಕ ಹೊಂದಿದ್ದ ಗ್ರಾಹಕರು ತಮ್ಮ ಕುರಿತು ಮಾಹಿತಿ ಸಲ್ಲಿಸುವುದು ಕಡ್ಡಾಯ ಮಾಡಲಾಗಿತ್ತು.
ಆದರೆ ಇದಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ಬರದ ಹಿನ್ನಲೆಯಲ್ಲಿ ಮಾಹಿತಿ ಸಲ್ಲಿಸಲು ಇದ್ದ ಗಡುವನ್ನು ನವೆಂಬರ್ 15ರಿಂದ ನವೆಂಬರ್ 30ರವರೆಗೆ ವಿಸ್ತರಿಸಲು ತೈಲ ಕಂಪೆನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ನಿರ್ಧರಿಸಿವೆ.












Click it and Unblock the Notifications