ಎಫ್ ಡಿಐ : ಸಂಸತ್ತಿನಲ್ಲಿ ಯುಪಿಎಗೆ ಸೋಲು ಖಚಿತ?

ನ. 22 ರಂದು ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಎಫ್ ಡಿಐ ಬಗ್ಗೆ ಚರ್ಚೆ ಹಾಗೂ ಮಂಡನೆಗೆ ಯುಪಿಎ ತಯಾರಿ ನಡೆಸಿದ್ದರೆ, ಅವಿಶ್ವಾಸ ಗೊತ್ತುವಳಿ ಮಂಡಿಸಲು ಬಿಜೆಪಿ, ಟಿಎಂಸಿ ಹಾಗೂ ಎಡಪಕ್ಷಗಳು ಸಿದ್ಧತೆ ನಡೆಸಿದೆ.
ಆದರೆ, ಎಫ್ ಡಿಐಗೆ ಸಂಸತ್ತಿನ ಒಪ್ಪಿಗೆ ಅಗತ್ಯವಿದೆಯೇ? ತಾಂತ್ರಿಕವಾಗಿ ನೋಡಿದರೆ, ಎಫ್ ಡಿಐ ಸರ್ಕಾರದ ಕಾರ್ಯಕಾರಿ ನಿರ್ಣಯವಾಗಿದ್ದು, ಆರ್ಥಿಕ ಸುಧಾರಣೆಗಾಗಿ ಅನಿವಾರ್ಯ ಎಂದು ಸರ್ಕಾರ ವಾದಿಸಬಹುದಾಗಿದೆ. ಇದಕ್ಕೆ ಸಂಸತ್ತಿನ ಅನುಮತಿ, ಒಪ್ಪಿಗೆ ಅಗತ್ಯವಿರುವುದಿಲ್ಲ.
ಅದರೆ, ಒಂದು ಪಕ್ಷ ಸಂಸತ್ತಿನ ಅಧಿವೇಶನದಲ್ಲಿ ಎಫ್ ಡಿಐ ಪರ ವಿರೋಧ ಮತಗಳು ಬಿದ್ದರೆ ಯುಪಿಎ ಮುಖಭಂಗ ಅನುಭವಿಸುವುದು ಖಾತ್ರಿಯಾಗಿದೆ. ಎಫ್ ಡಿಐ ವಿಷಯದಲ್ಲಿ ಯುಪಿಎಗೆ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷಗಳು ಬೆಂಬಲ ನೀಡುತ್ತಿಲ್ಲ.
ಡಿಎಂಕೆ ಕರುಣಾನಿಧಿ ಅವರು ಎಫ್ ಡಿಐ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಿಲ್ಲ. ಪಶ್ಚಿಮ ಬಂಗಾಳದಂತೆ ತಮಿಳುನಾಡಿನ ಸಣ್ಣ ಮತ್ತು ಮಧ್ಯಮ ಗಾತ್ರ ಉದ್ದಿಮೆ ನಡೆಸುತ್ತಿರುವ ವ್ಯಾಪಾರಿಗಳು ಎಫ್ ಡಿಐಗೆ ವಿರೋಧ ವ್ಯಕ್ತಪಡಿಸಿದ್ದನ್ನು ಕರುಣಾನಿಧಿ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಎಫ್ ಡಿಐಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿದರೆ ಯುಪಿಎಗೆ ವಿರೋಧ ವ್ಯಕ್ತಪಡಿಸಿದಂತೆ ಹಾಗೂ ಎನ್ ಡಿಎಗೆ ಪರೋಕ್ಷವಾಗಿ ಬೆಂಬಲ ನೀಡಿದಂತೆ ಆಗುತ್ತದೆ ಆದ್ದರಿಂದ ಕರುಣಾನಿಧಿ ದ್ವಂದ್ವ ಪರಿಸ್ಥಿತಿಯಲ್ಲಿದ್ದಾರೆ.
ಅಕಾಲಿ ದಳ ಬಿಟ್ಟು ಎನ್ ಡಿಎ ಮೈತ್ರಿಕೂಟ ಸಂಪೂರ್ಣವಾಗಿ ಎಫ್ ಡಿಐಗೆ ವಿರೋಧ ವ್ಯಕ್ತಪಡಿಸಿದೆ. ಟಿಎಂಸಿ, ಎಐಎಡಿಎಂಕೆ ಹಾಗೂ ಬಿಜೆಡಿ ಪಕ್ಷಗಳು ಬಂದ್ ನಡೆಸಿ ಭಾರಿ ಪ್ರತಿರೋಧ ಒಡ್ಡಿದೆ.
ಜೀವ ವಿಮೆ, ಬ್ಯಾಂಕಿಂಗ್, ಪಿಂಚಣಿ ಕ್ಷೇತ್ರಗಳಲ್ಲಿ ಎಫ್ ಡಿಐ ಬಗ್ಗೆ ಮತದಾನ ಅಗತ್ಯವಿದೆ. ಸಂಸತ್ತಿನಲ್ಲೇ ನಿರ್ಣಯವಾಗಲಿ ಎಂದು ಎಡಪಕ್ಷಗಳು ಘೋಷಿಸಿದೆ.
ಸಂಸತ್ತಿನಲ್ಲಿ ಯುಪಿಎ 262 ಸ್ಥಾನ ಪ್ಲಸ್ 50 ಬಾಹ್ಯ ಬೆಂಬಲ ಹೊಂದಿದೆ. ಎನ್ ಡಿಎ 151 ಹಾಗೂ ಎಡಪಕ್ಷಗಳು, ಇತರೆ 87 ಸ್ಥಾನ ಹೊಂದಿದೆ. ಚಳಿಗಾಲದ ಅಧಿವೇಶನದಲ್ಲಿ ಸುಮಾರು 100 ಕ್ಕೂ ಅಧಿಕ ಮಸೂದೆಗಳು ಬಾಕಿ ಇದ್ದು 3 ಮಸೂದೆಗಳು ಮಾತ್ರ ಅನುಮೋದನೆ ಪಡೆಯುವ ಸಾಧ್ಯತೆಯಿದೆ.
ಆದರೆ, ಚರ್ಚೆ ನಡೆಸದೆ ಪ್ರತಿಪಕ್ಷಗಳು ಎಂದಿನಂತೆ ಕಲಾಪವನ್ನು ಮುಂದೂಡುವಂತೆ ಮಾಡಿದರೆ ಯುಪಿಎಗೆ ಒಳ್ಳೆಯದು. ಒಟ್ಟಾರೆ, ಎಫ್ ಡಿಐ ತರುವಲ್ಲಿ ಯುಪಿಎ ಆತುರದ ನಿರ್ಧಾರ ಕೈಗೊಂಡಿದ್ದು ಈಗ ಕೈಕಚ್ಚಿಕೊಳ್ಳುವಂತಾಗಿದೆ.












Click it and Unblock the Notifications