ಬಿಜೆಪಿ ವರಿಷ್ಠರಿಗೆ ತುಮಕೂರು ಎಂಪಿ ಚಾಲೆಂಜ್

ನಾನು ಬಿಜೆಪಿಗೆ ರಾಜೀನಾಮೆ ನೀಡುವುದಿಲ್ಲ. ನಾನು ಕರ್ನಾಟಕ ಜನತಾ ಪಕ್ಷದ ಜೊತೆಗೆ ಬಹಿರಂಗವಾಗಿ ಕಾಣಿಸಿಕೊಳ್ಳುತ್ತೇನೆ ಎಂದು ವರಿಷ್ಠರ ಎದುರು ಬಸವರಾಜ್ ತೊಡೆ ತಟ್ಟಿ ನಿಂತಿದ್ದಾರೆ.
ಡಿಸೆಂಬರ್ 10ರಂದು ಹಾವೇರಿಯಲ್ಲಿ ನಡೆಯಲಿರುವ ಕರ್ನಾಟಕ ಜನತಾ ಪಕ್ಷದ ಸಮಾವೇಶದಲ್ಲಿ ನಾನು ಪಾಲ್ಗೊಳ್ಳುತ್ತಿದ್ದೇನೆ. ಬಿಜೆಪಿ ಹೈಕಮಾಂಡ್ ಏನು ಮಾಡುತ್ತೋ ಮಾಡಿಕೊಳ್ಳಲಿ. ಬೇಕಾದರೆ ಬಿಜೆಪಿಯಿಂದ ನನ್ನ ಉಚ್ಚಾಟಿಸಲಿ ಎಂದು ಬಸವರಾಜ್ ವರಿಷ್ಠರಿಗೆ ಸವಾಲೆಸೆದಿದ್ದಾರೆ.
ಯಡಿಯೂರಪ್ಪನವರನ್ನು ದೆಹಲಿಯ ವರಿಷ್ಠರು ಮತ್ತು ರಾಜ್ಯದ ನಾಯಕರುಗಳು ನಡೆಸಿಕೊಳ್ಳುತ್ತಿರುವ ರೀತಿ ನೋಡುತ್ತಿದ್ದರೆ ವ್ಯಥೆಯಾಗುತ್ತಿದೆ. ನನ್ನ ನಿಷ್ಠೆ ಏನಿದ್ದರೂ ಅದು ಯಡಿಯೂರಪ್ಪನವರ ಮೇಲೆ, ಇದಕ್ಕಾಗಿ ನಾನು ಯಾವ ತ್ಯಾಗಕ್ಕೂ ಸಿದ್ದ ಎಂದು ಬಸವರಾಜ್ ಹೇಳಿದ್ದಾರೆ.
ಯಡಿಯೂರಪ್ಪ ಎಲ್ಲಾ ಹಗರಣದಿಂದ ಹೆಚ್ಚು ಕಮ್ಮಿ ಮುಕ್ತರಾಗಿದ್ದಾರೆ. ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿದವರು ಮುಂದೊಂದು ದಿನ ಅನುಭವಿಸುತ್ತಾರೆ ಎಂದು ಬಸವರಾಜ್ ಲೋಕೋಪಯೋಗಿ ಸಚಿವ ಉದಾಸಿ ನಿವಾಸದಲ್ಲಿ ಶುಕ್ರವಾರ (ಅ 26) ನಡೆದ ಸಭೆಯ ಬಳಿಕ ಹೇಳಿದ್ದಾರೆ.
ಯಡಿಯೂರಪ್ಪ ಎಲ್ಲಿ ಇರುತ್ತಾರೋ ಈ ಬಸವರಾಜ್ ಅಲ್ಲಿ ಇರುತ್ತಾನೆ. ದೆಹಲಿಯ ಹೈಕಮಾಂಡ್ ನನ್ನ ಮೇಲೆ ಶಿಸ್ತಿನ ಕ್ರಮ ತೆಗೆದುಕೊಂಡರೆ ನಾನು ಕ್ಯಾರೇ ಮಾಡುವವನಲ್ಲ ಎಂದು ಬಸವರಾಜ್ ಕಡ್ಡಿ ಮುರಿದಹಾಗೆ ಹೇಳಿದ್ದಾರೆ.
ಈಗಾಗಲೇ ಸಹಕಾರ ಸಚಿವ ಬಿ ಜಿ ಪುಟ್ಟಸ್ವಾಮಿ ಮತ್ತು ಪಶುಸಂಗೋಪನಾ ಸಚಿವ ರೇವೂನಾಯಕ್ ಬೆಳಮಗಿ ಯಡಿಯೂರಪ್ಪ ಪರ ಹೇಳಿಕೆ ನೀಡಿದ್ದಾರೆ.












Click it and Unblock the Notifications